ಇಂದಿನ ಧಾವಂತದ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೆಲಸ, ಜವಾಬ್ದಾರಿ ಹಾಗೂ ತಂತ್ರಜ್ಞಾನದ ಹಿಂದೆ ಓಡುತ್ತಿದ್ದಾರೆ. ಈ ಓಟದಲ್ಲಿ ನಮಗೆ ತಿಳಿಯದಂತೆ ನಾವು ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ನಮ್ಮ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದೇವೆ. ಮೇಲ್ನೋಟಕ್ಕೆ ಇವು ತೀರಾ ಸಾಮಾನ್ಯ ಅಥವಾ ಸಣ್ಣ ತಪ್ಪುಗಳಂತೆ ಕಂಡರೂ, ದೀರ್ಘಾವಧಿಯಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತವೆ.
ನಿಮ್ಮ ದೇಹವನ್ನು ಒಳಗಿನಿಂದಲೇ ಕುಗ್ಗಿಸುವ ಹಾಗೂ ಅನಾರೋಗ್ಯಕ್ಕೆ ಈಡುಮಾಡುವ ಪ್ರಮುಖ ಕೆಟ್ಟ ಅಭ್ಯಾಸಗಳು ಮತ್ತು ಅವುಗಳಿಂದಾಗುವ ಹಾನಿಗಳ ವಿವರ ಇಲ್ಲಿದೆ:
ಇಂದಿನ ಕಂಪ್ಯೂಟರ್ ಹಾಗೂ ಮೊಬೈಲ್ ಯುಗದಲ್ಲಿ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಸಾಮಾನ್ಯವಾಗಿದೆ. ಆದರೆ ವೈದ್ಯರ ಪ್ರಕಾರ, “ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ”. ಇದು ರಕ್ತಸಂಚಾರವನ್ನು ಮಂದಗೊಳಿಸುತ್ತದೆ, ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ನಮ್ಮ ದೇಹದ ಶೇಕಡಾ 60 ಭಾಗ ನೀರಿನಿಂದಾಗಿದೆ. ಕೆಲಸದ ಒತ್ತಡದಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯುವುದು ಬಹುತೇಕರ ಅಭ್ಯಾಸ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವುದು, ಚರ್ಮದ ಕಾಂತಿ ಕುಂದುವುದು, ಸುಸ್ತು ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ರಾತ್ರಿ ತಡವಾಗಿ ಮಲಗುವುದು ಹಾಗೂ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡದಿರುವುದು ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುತ್ತದೆ. ಸರಿಯಾದ ನಿದ್ರೆಯಿಲ್ಲದಿದ್ದರೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ, ಮಾನಸಿಕ ಒತ್ತಡ, ಖಿನ್ನತೆ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಸುಲಭವಾಗಿ ಆವರಿಸುತ್ತವೆ.
ರುಚಿಗೆ ಮರುಳಾಗಿ ಅತಿಯಾದ ಎಣ್ಣೆ, ಸಕ್ಕರೆ ಹಾಗೂ ಮಸಾಲೆ ಪದಾರ್ಥಗಳಿರುವ ಜಂಕ್ ಫುಡ್, ಬೇಕರಿ ತಿನಿಸುಗಳು ಮತ್ತು ತಂಪಾದ ಪಾನೀಯಗಳನ್ನು ಸೇವಿಸುವುದು ಯಕೃತ್ತು ಮತ್ತು ಜಠರಕ್ಕೆ ಮಾರಕ. ಇದು ಬೊಜ್ಜು ಬೆಳಸುವುದಲ್ಲದೆ, ಅಕಾಲಿಕ ವೃದ್ಧಾಪ್ಯಕ್ಕೂ ಕಾರಣವಾಗುತ್ತದೆ.
ರಾತ್ರಿ ಮಲಗುವ ಮುನ್ನ ಕತ್ತಲೆಯಲ್ಲಿ ಮೊಬೈಲ್ ನೋಡುವುದು ಕಣ್ಣುಗಳ ದೃಷ್ಟಿಯನ್ನು ಹಾಳುಗೆಡವುದಲ್ಲದೆ, ಮೆದುಳಿನಿಂದ ಶ್ರವಿಸುವ ‘ಮೆಲಟೋನಿನ್’ ಎಂಬ ನಿದ್ರಾ ಹಾರ್ಮೋನ್ ಸ್ರವಿಸುವಿಕೆಯನ್ನು ತಡೆಯುತ್ತದೆ. ಇದರಿಂದ ದೀರ್ಘಕಾಲದ ನಿದ್ರಾಹೀನತೆ ಮತ್ತು ಕುತ್ತಿಗೆ ಸಾಲಿನ ನೋವು ಎದುರಾಗುತ್ತದೆ.
ಸಮಯವಿಲ್ಲವೆಂಬ ಕಾರಣಕ್ಕೆ ಬೆಳಗಿನ ಉಪಹಾರವನ್ನು ಮಾಡದೆ ಇರುವುದು ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತರುತ್ತದೆ. ಇದು ದಿನವಿಡೀ ದೇಹದ ಶಕ್ತಿಯನ್ನು ಕುಗ್ಗಿಸಿ, ಮಧ್ಯಾಹ್ನ ಅತಿಯಾಗಿ ತಿನ್ನುವಂತೆ ಮಾಡುತ್ತದೆ.
ಪರಿಹಾರವೇನು?
ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಿರಿ.
ಪ್ರತಿದಿನ 30 ನಿಮಿಷಗಳ ಕಾಲ ನಡಿಗೆ ಅಥವಾ ವ್ಯಾಯಾಮ ಮಾಡಿ.
ರಾತ್ರಿ ಸರಿಯಾದ ಸಮಯಕ್ಕೆ ಮಲಗಿ, ಕನಿಷ್ಠ 7-8 ಗಂಟೆಗಳ ಗಾಢ ನಿದ್ರೆ ಮಾಡಿ.
ನೈಸರ್ಗಿಕ ಹಣ್ಣು, ತರಕಾರಿ ಹಾಗೂ ಮನೆ ಅಡುಗೆಗೆ ಹೆಚ್ಚಿನ ಆದ್ಯತೆ ನೀಡಿ.
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ನಿಮ್ಮ ದೇಹವನ್ನು ಪ್ರೀತಿಸಿ, ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಸದಾ ಆರೋಗ್ಯವಾಗಿರಿ.



