ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ (SIR) ಮೂರನೇ ಹಂತ ಪೂರ್ಣಗೊಂಡಿದ್ದು, ದೇಶಾದ್ಯಂತ ಬೃಹತ್ ಬದಲಾವಣೆ ಕಂಡುಬಂದಿದೆ. ಗೈರುಹಾಜರಿ, ವಾಸಸ್ಥಳ ಬದಲಾವಣೆ, ಸಾವು, ನಕಲಿ ನೋಂದಣಿ ಹಾಗೂ ಇತರ ಕಾರಣಗಳ ಆಧಾರದ ಮೇಲೆ ಒಟ್ಟು 1.05 ಕೋಟಿಗೂ ಹೆಚ್ಚು (1,05,12,457) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ.
ಆಂಧ್ರಪ್ರದೇಶ ಹಾಗೂ ಹರಿಯಾಣದಲ್ಲಿ ಅತಿ ಹೆಚ್ಚು ಡಿಲೀಟ್
ಇತ್ತೀಚೆಗೆ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯ ಪ್ರಕಾರ, ಆಂಧ್ರಪ್ರದೇಶದಲ್ಲಿ ಬರೋಬ್ಬರಿ 44.89 ಲಕ್ಷ ಹೆಸರುಗಳನ್ನು ತೆರವುಗೊಳಿಸಲಾಗಿದ್ದು, ಒಟ್ಟು ಮತದಾರರ ಸಂಖ್ಯೆ 4.16 ಕೋಟಿಯಿಂದ 3.71 ಕೋಟಿಗೆ ಇಳಿಕೆಯಾಗಿದೆ. ಇತ್ತ ಹರಿಯಾಣದಲ್ಲಿ 33.83 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
10 ರಾಜ್ಯಗಳಲ್ಲಿ ಪರಿಷ್ಕರಣೆ ಪೂರ್ಣ: ಸರಿಪಡಿಸಿಕೊಳ್ಳಲು ಅವಕಾಶ
ಆಂಧ್ರ ಮತ್ತು ಹರಿಯಾಣ ಮಾತ್ರವಲ್ಲದೆ ಒಡಿಶಾ, ಉತ್ತರಾಖಂಡ, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಈ 10 ಪ್ರದೇಶಗಳ 10.89 ಕೋಟಿ ಮತದಾರರಲ್ಲಿ 1.13 ಕೋಟಿ ಹೆಸರು ರದ್ದಾಗಿದ್ದು, 9.75 ಕೋಟಿ ಮತದಾರರು ಪಟ್ಟಿಯಲ್ಲಿ ಉಳಿದಿದ್ದಾರೆ.



