ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯ ಸವಣೂರು ತಾಲೂಕಿನ ಮಂಟಗಣಿ–ಹತ್ತಿಮತ್ತೂರು ರಸ್ತೆ ಸೇರಿದಂತೆ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲಕೋಟಿ ಗ್ರಾಮಗಳ ಸಂಪರ್ಕ ರಸ್ತೆ ಬದಿಗಳಲ್ಲಿ ಒಟ್ಟು 9ಕ್ಕೂ ಹೆಚ್ಚು ಶ್ವಾನಗಳನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ವಾಮಾಚಾರದ ಶಂಕೆಗೆ ಕಾರಣವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ದುಷ್ಕರ್ಮಿಗಳು ಶ್ವಾನಗಳ ಬಾಯಿಯನ್ನು ದಾರದಿಂದ ಕಟ್ಟಿ ಹತ್ಯೆಗೈದಿರುವುದು ತಿಳಿದುಬಂದಿದೆ. ಅಲ್ಲದೆ ಮೃತ ಶ್ವಾನಗಳ ಬಳಿ ಕೋಳಿಯ ರೆಕ್ಕೆಗಳನ್ನು ಇಟ್ಟು ಕುಂಕುಮ ಹಚ್ಚಿರುವುದು ಕಂಡುಬಂದಿದ್ದು, ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಮೀನುಗಳಿಗೆ ತೆರಳುವ ಮೂರು ರಸ್ತೆ ಬದಿಗಳಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಗ್ರಾಮಸ್ಥರಲ್ಲಿ ಭಯವನ್ನು ಮತ್ತಷ್ಟು ಹೆಚ್ಚಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯಾವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಮಾಚಾರದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಇಂತಹ ಅಮಾನವೀಯ ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ;
ಈ ಘಟನೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳೀಯ ಶಾಸಕರು ಹಾಗೂ ತಹಶೀಲ್ದಾರ್ ರವಿಕುಮಾರ ಕೊರವರ ಅವರಿಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.



