August 3, 2026
Monday, August 3, 2026
spot_img

ಲಕ್ಷ್ಮೀ ಹೆಬ್ಬಾಳ್ಕರ್‌ ಕೈ ತಪ್ಪಿದ ಸಚಿವ ಸ್ಥಾನ: ಬೆಳಗಾವಿಯಲ್ಲಿ ಭುಗಿಲೆದ್ದ ಬೆಂಬಲಿಗರ ಆಕ್ರೋಶ, ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯ ಸಚಿವ ಸಂಪುಟ ಪುನರ್ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಬೆಳಗಾವಿ ರಾಜಕಾರಣದಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲ ಸೃಷ್ಟಿಯಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಾರಿಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆ:

ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೂರಾರು ಅಭಿಮಾನಿಗಳು ಹಾಗೂ ಬೆಂಬಲಿಗರು ಜಮಾವಣೆಗೊಂಡು, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಡಿಕೆ ಶಿಮಕೂರ್ ನೇತ್ರತ್ವದ ಸರ್ಕಾರ ವಿರುದ್ದ ಘೋಷನೆ ಕೂಗಿ ಅಸಮಾಧಾನ ಹೊರ ಹಾಕಿದರು.

ಬೆಳಗಾವಿ ಜಿಲ್ಲೆಗೆ ಅನ್ಯಾಯದ ಆರೋಪ:

“ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷದ ಸಂಘಟನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಇಡೀ ಜಿಲ್ಲೆಗೆ ಎಸಗಿದ ದೊಡ್ಡ ಅನ್ಯಾಯ” ಎಂದು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಆರೋಪಿಸಿದರು.

ನಿರ್ಧಾರ ಮರುಪರಿಶೀಲನೆಗೆ ಆಗ್ರಹ:

ಜಿಲ್ಲೆಯ ಜನರ ಭಾವನೆಗಳಿಗೆ ಗೌರವ ನೀಡಿ, ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅರ್ಹ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಂಚಾರ ವ್ಯತ್ಯಯ – ಪೊಲೀಸರ ತಕ್ಷಣದ ಕಾರ್ಯಾಚರಣೆ:

ಪ್ರತಿಭಟನೆಯಿಂದಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು, ಸಾರ್ವಜನಿಕರು ಪರದಾಡುವಂತಾಯಿತು. ಪರಿಸ್ಥಿತಿ ಕೈಮೀರಿ ಹೋಗದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಸಂಚಾರವನ್ನು ಸುಗಮಗೊಳಿಸಿದರು. ಪ್ರಸ್ತುತ ಸ್ಥಳದಲ್ಲಿ ಶಾಂತಿ ವಾತಾವರಣ ನೆಲೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !