ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಆಶೀರ್ವಾದ ಕಾ ದಿಯಾ’ ಅಭಿಯಾನದ ಭಾಗವಾಗಿ ಗುರುವಾರ ದೆಹಲಿಯ ಕರ್ತವ್ಯ ಪಥವು ಬರೋಬ್ಬರಿ 1.25 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದೆ. ಈ ಅಪೂರ್ವ ದೀಪೋತ್ಸವವನ್ನು ಕಣ್ಣುಂಬಿಕೊಳ್ಳಲು ಮತ್ತು ಪ್ರಧಾನಿಯವರ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಹಾರೈಸಲು ನೂರಾರು ನಾಗರಿಕರು ಕರ್ತವ್ಯ ಪಥದಲ್ಲಿ ಒಟ್ಟಾಗಿ ಸೇರಿದ್ದರು.
ದೀಪ ಬೆಳಗಿದ ದೆಹಲಿ ಸಿಎಂ ರೇಖಾ ಗುಪ್ತಾ
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೂ ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ಹಣತೆಗಳನ್ನು ಬೆಳಗಿಸಿದರು ಹಾಗೂ ದೇಶದ ಸೇವೆಗಾಗಿ ಪ್ರಧಾನಿ ಮೋದಿಯವರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ಸಿಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದ ಪೋಟೋಗಳನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಕಚೇರಿ (CMO), ಕರ್ತವ್ಯ ಪಥದಲ್ಲಿ 1.25 ಲಕ್ಷ ದೀಪಗಳನ್ನು ಬೆಳಗಿಸಿರುವುದು ಸಾರ್ವಜನಿಕರ ಕರ್ತವ್ಯ, ಸೇವೆ ಮತ್ತು ಜನಭಾಗೀದಾರಿಕೆಯ ಸಂಕೇತವಾಗಿದೆ ಹಾಗೂ ಇದು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.
ದೇಶಾದ್ಯಂತ ಹರಡಿದ ದೀಪದ ಬೆಳಕು
‘ಆಶೀರ್ವಾದ ಕಾ ದಿಯಾ’ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಪ್ರಧಾನಿ ಹುಟ್ಟುಹಬ್ಬದ ಸಂಭ್ರಮಾಚರಣೆಗಳು ನಡೆಯುತ್ತಿವೆ. ಜನರು ತಮ್ಮ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪ್ರಧಾನಿಯವರಿಗೆ ಒಳಿತನ್ನು ಬಯಸುತ್ತಿದ್ದಾರೆ. ದೆಹಲಿ ಮಾತ್ರವಲ್ಲದೆ ಉಜ್ಜಯಿನಿ ಮತ್ತು ಅಸ್ಸಾಂನಲ್ಲೂ ಸಹಸ್ರಾರು ದೀಪಗಳನ್ನು ಬೆಳಗಿಸಿ ಜನ್ಮದಿನವನ್ನು ಆಚರಿಸಲಾಗಿದೆ.
ಬಿಜೆಪಿಯಿಂದ ‘ಸೇವಾ ಸಂಕಲ್ಪ ಅಭಿಯಾನ’
ದೆಹಲಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಗಳು ಬಿಜೆಪಿಯ ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿವೆ. ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಯ ನೆನಪಿಗಾಗಿ ಸೆಪ್ಟೆಂಬರ್ 17 ರಿಂದ ಈ ಅಭಿಯಾನ ಆರಂಭವಾಗಿದ್ದು, ಇದರ ಅಡಿಯಲ್ಲಿ ಸಾರ್ವಜನಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರಕ್ತದಾನ ಶಿಬಿರಗಳು, ಧಾರ್ಮಿಕ ಪೂಜೆಗಳು ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.



