ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಹಲವು ಶಾಸಕರು ನಿರಾಸೆಯಲ್ಲಿದ್ದು, ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜೀನಾಮೆ ಕೊಟ್ಟರೆ ಎರಡು ನಿಮಿಷಕ್ಕೆ ಅಂಗೀಕಾರ ಮಾಡಲು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು, ಪಕ್ಷದಲ್ಲಿ ಶಿಸ್ತು ಮುಖ್ಯ, ಒಬ್ಬ ವ್ಯಕ್ತಿಗಿಂತ ಪಕ್ಷ ದೊಡ್ಡದಲ್ವಾ? ಎಂದು ಪ್ರಶ್ನಿಸಿದ್ದಾರೆ. ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರಿಗೆ ಕೊಟ್ಟಿರಲಿಲ್ಲ. ನಾನು, ಪರಮೇಶ್ವರ್ ಕೂಡ ಸಚಿವ ಸ್ಥಾನ ಕೊಡದಿದ್ದಾಗ ಸುಮ್ಮನೆ ಇರಲಿಲ್ಲವಾ? ರಾಜೀನಾಮೆ ಕೊಡ್ತೀನಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದೆನಾ? ಎಂದಿದ್ದಾರೆ.
ರಾಜಕೀಯದಲ್ಲಿ ತಾಳ್ಮೆ ತುಂಬಾನೇ ಮುಖ್ಯ. ಪ್ರತಿ ದಿನವೂ ನಮ್ಮ ದಿನವೇ ಆಗಿರೋದಿಲ್ಲ. ನಾನು ತಾಳ್ಮೆ ಕಳೆದುಕೊಂಡಿದ್ದೆನಾ? ತಾಳ್ಮೆಯಿಂದ ಸುಮ್ಮನೆ ಇದ್ದೆ ಅಲ್ವಾ? ಎಲ್ಲರೂ ಹಾಗೇ ಇರಬೇಕು. ಇಲ್ಲ ನಾವು ರಾಜೀನಾಮೆ ಕೊಟ್ಟೇ ಕೊಡುತ್ತೇವೆ ಎಂದು ಹೇಳುವುದಾದರೆ ಎರಡೇ ನಿಮಿಷದಲ್ಲಿ ಅಂಗೀಕಾರ ಮಾಡೋಕೆ ಖಡಕ್ ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.
ಅಸಮಾಧಾನಿತ ಶಾಸಕರು ಮಾಧ್ಯಮಗಳ ಮುಂದೆ ನಮ್ಮ ಬೆಂಬಲಿಗರ ಜೊತೆ ಚರ್ಚೆ ಮಾಡಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆ ನಿರ್ಣಯ ಮಾಡಿದ್ದರು. ಈ ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡಿ ಎಂದು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.



