August 25, 2026
Tuesday, August 25, 2026
spot_img

ಚಂದ್ರಗೆ ಇಂದು ಅಪ್ಪಳಿಸಲಿದೆ ಬ್ಲೂ ಘೋಸ್ಟ್? ಸೃಷ್ಟಿಯಾಗಲಿದೆಯೇ 16X90 ಅಡಿ ಆಳ ಅಗಲದ ಕುಳಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಮಾರು ಒಂದು ವರ್ಷದಿಂದಲೂ ಬಾಹ್ಯಾಕಾಶದಲ್ಲಿ ಅಲೆದಾಡುತ್ತಿದ್ದ ಸ್ಪೇಸ್‌ಎಕ್ಸ್‌ ರಾಕೆಟ್‌ನ ಬೃಹತ್‌ ಭಾಗವೊಂದು ಇಂದು ಚಂದ್ರ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ.

ಉದ್ದೇಶಪೂರ್ವಕವಾಗಿ ಭಾರೀ ತೂಕದ ವಸ್ತು ಚಂದ್ರನ ಮೇಲೆ ಬಿದ್ದರೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಯಾರೂ ಈ ರಾಕೆಟ್‌ನ್ನು ಸ್ಪೇಸ್‌ಗೆ ಕಳುಹಿಸಿಲ್ಲ. ರಾಕೆಟ್‌ನ ಭಾಗ ಚಂದ್ರನನ್ನು ಅಪ್ಪಳಿಸುವುದರಿಂದ ಭೂಮಿಗಾಗಲಿ, ಚಂದ್ರನ ಮೇಲಿನ ಕಾರ್ಯಾಚರಣೆಗಾಗಲಿ ಹಾನಿ ಆಗೋದಿಲ್ಲ.

ಈ ಕಾರಣದಿಂದ ಆತಂಕವಿಲ್ಲದಂತೆ ಅಧ್ಯಯನದ ಕಡೆ ವಿಜ್ಞಾನಿಗಳು ಮುಖ ಮಾಡಿದ್ದಾರೆ. ಈ ರೀತಿ ರಾಕೆಟ್‌ನ ಬೃಹತ್‌ ಭಾಗ ಚಂದ್ರನ ಮೇಲೆ ಬಿದ್ದರೆ ಏನಾಗಬಹುದು ಎಂದು ಕಾದುನೋಡಬೇಕಿದೆ.

ವಾಪಾಸ್‌ ಬರೋಕೆ ಇಂಧನ ಖಾಲಿ!

2025ರ ಜ.15ರಂದು ಫೈರ್‌ಫ್ಲೈ ಏರೋಸ್ಪೇಸ್‌ನ ”ಬ್ಲೂ ಘೋಸ್ಟ್” ಲ್ಯಾಂಡರ್ ಮತ್ತು ಜಪಾನ್‌ನ ಐಸ್ಪೇಸ್ ಹಕುಟೊ-ಆರ್ ಲ್ಯಾಂಡರ್‌ನ್ನು ಹೊತ್ತು ಚಂದ್ರನಂಗಳಕ್ಕೆ ಫಾಲ್ಕನ್‌-9 ರಾಎಕೆಟ್‌ ಹೋಗಿತ್ತು. ಬಾಹ್ಯಾಕಾಶ ನೌಕೆಗಳನ್ನು ಅದರ ಜಾಗಕ್ಕೆ ತಲುಪಿಸಿದ ನಂತರ ಅದರ ಕೆಲಸ ಮುಗಿದಿತ್ತು. ಆದರೆ ಅದು ಭೂಮಿಗೆ ವಾಪಾಸಾಗಲು ಸೂರ್ಯನ ಸುತ್ತ ಇರುವ ಕಕ್ಷೆಯತ್ತ ಹೋಗಬೇಕಿತ್ತು. ಅದಕ್ಕೆ ಬೇಕಾದಷ್ಟು ಇಂಧನ ಇರಲಿಲ್ಲ.ಭೂಮಿ, ಚಂದ್ರ ಹಾಗೂ ಸೂರ್ಯನ ಗುರುತ್ವಾಕರ್ಷಣೆಯ ನಡುವೆ ಸಿಲುಕಿ ಬಾಹ್ಯಾಕಾಶದಲ್ಲೇ ಅಲೆಯುತ್ತಿತ್ತು. ಇದೀಗ ಚಂದ್ರನ ಗುರುತ್ವಾಕರ್ಶನ ಶಕ್ತಿ ರಾಕೆಟ್‌ನ್ನು ತನ್ನತ್ತ ಎಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಾಕೆಟ್‌ ಚಂದ್ರನ ಅಂಗಳಕ್ಕೆ ಅಪ್ಪಳಿಸುತ್ತದೆ ಎಂದು ಹೇಳಲಾಗಿದೆ.

ಗಂಟೆಗೆ 8,700 ಕಿ.ಮೀ.(ಭೂಮಿಯಲ್ಲಿ ಶಬ್ದದ ಗತಿಗಿಂತ 7 ಪಟ್ಟು ಹೆಚ್ಚು) ವೇಗದಲ್ಲಿ ಚಲಿಸುವ ರಾಕೆಟ್‌, ಚಂದ್ರನಲ್ಲಿರುವ ಐನ್‌ಸ್ಟೈನ್ ಕುಳಿಯ ಬಳಿ ಅಪ್ಪಳಿಸುವ ನಿರೀಕ್ಷೆ ಇದೆ. ಪರಿಣಾಮ, 90 ಅಡಿ ಅಗಲ ಹಾಗೂ 16 ಅಡಿ ಆಳದ ಕುಳಿ ಸೃಷ್ಟಿಯಾಗುವ ಅಂದಾಜಿದೆ. ಚಂದ್ರನ ಮೈಗೆ ಇದು ಅಪ್ಪಳಿಸುವ ವೇಳೆ ಆ ಪ್ರದೇಶದಲ್ಲಿ ಬೆಳಕಿರುವ ಕಾರಣ, ವಿಜ್ಞಾನಿಗಳಿಗೆ ಈ ಪ್ರಕ್ರಿಯೆಯನ್ನು ವೀಕ್ಷಿಸುವುದು ಸುಲಭವಾಗಲಿದೆ.

ಯಾವೆಲ್ಲಾ ವಿಷಯದ ಬಗ್ಗೆ ಅಧ್ಯಯನ?

ಇಂದು ನಡೆಯುವ ಪ್ರಕ್ರಿಯೆ ಯಾರೂ ಅಂದಾಜಿಸದ್ದು. ಹೀಗಾಗಿ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳ ಕಾತರರಾಗಿದ್ದಾರೆ. ಚಂದ್ರನ ಅಂಗಳಕ್ಕೆ ಅಷ್ಟು ದೊಡ್ಡ ವಸ್ತು ಬಿದ್ದಾಗ ಏನಾಗುತ್ತದೆ. ಕುಳಿಗಳು ಹೇಗೆ ಬೀಳುತ್ತವೆ. ಬಿದ್ದ ರಾಕೆಟ್‌ ಮತ್ತೆ ಪುಟಿಯುತ್ತದಾ? ಎಷ್ಟು ಎತ್ತರಕ್ಕೆ? ಅಂಗಳದಲ್ಲಿ ಧೂಳಿದೆಯಾ? ಎಷ್ಟು ಎತ್ತರಕ್ಕೆ ಮೇಲೆ ಹೋಗುತ್ತದೆ ಇನ್ನಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಯಲಿದೆ.

ಇದರಿಂದ ಏನೂ ಸಮಸ್ಯೆ ಆಗೋದಿಲ್ವಾ?

ಚಂದ್ರನ ಮೇಲೆ ರಾಕೆಟ್‌ ಬೀಳೋದು ಅಂದ್ರೆ ಸಾಮಾನ್ಯವಾದ ವಿಷಯ ಅಲ್ಲ. ಇದರಿಂದ ಹಾನಿ ಆಗೋದಿಲ್ವಾ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುವಂಥದ್ದೇ. ರಾಕೆಟ್‌ ಅಪ್ಪಳಿಕೆಯಿಂದ ಯಾವುದೇ ಹಾನಿ ಆಗುವುದಿಲ್ಲ. ಆದರೆ ಹೀಗೆ ರಾಕೆಟ್‌ನ ಭಾಗಗಳು ಚಂದ್ರ ಮೇಲೆಯೇ ಉಳಿದರೆ ಅಲ್ಲಿ ತ್ಯಾಜ್ಯ ಹೆಚ್ಚಾಗುತ್ತದೆ. ಇದು ಮುಂದಿನ ಯೋಜನೆಗೆ ಅಡಚಣೆಯಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !