August 5, 2026
Wednesday, August 5, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 49 | ಉತ್ತರ ಕರ್ನಾಟಕದ ಸ್ಪೆಷಲ್‌ ತೋಯಿಸಿದ ಮಂಡಕ್ಕಿ, ಮಿರ್ಚಿ ಬಜ್ಜಿ ಹೇಗೆ ಮಾಡೋದು ಗೊತ್ತಾ?

ಉತ್ತರ ಕರ್ನಾಟಕದ ಊಟ ಎಂದ ತಕ್ಷಣ ಎಲ್ಲರಿಗೂ ಕಣ್ಣಿಗೆ ಬರೋದು ಜೋಳದ ರೊಟ್ಟಿ ಹಾಗೂ ಮಂಡಕ್ಕಿ ಬೋಂಡ. ಇದೇನು ಬೆಳ್ಳಂಬೆಳಗ್ಗೆ ಬೋಂಡ ತಿಂತಾರಾ ಎಂದುಕೊಳ್ಳಬೇಡಿ. ನಾರ್ತ್‌ ಇಂಡಿಯಾದಲ್ಲಿ ಬೆಳ್ಳಂಬೆಳಗ್ಗೆ ತಿಂಡಿಗೆ ಜಿಲೇಬಿ, ಕಚೋರಿ ಹಾಗೂ ಸಮೋಸ ತಿನ್ನುತ್ತಾರಂತೆ. ಇನ್ನು ನಮ್ಮಲ್ಲಿ ಒಂದು ಬೋಂಡ ತಿಂದ್ರೆ ಏನಾಗೋದಿಲ್ಲ!

ರುಚಿರುಚಿಯಾದ ತೋಯಿಸಿದ ಮಂಡಕ್ಕಿ ಹಾಗೂ ಮಿರ್ಚಿ ಬಜ್ಜಿಯ ರೆಸಿಪಿ ಇಲ್ಲಿದೆ..

ತೋಯಿಸಿದ ಮಂಡಕ್ಕಿಗೆ ಬೇಕಾಗುವ ಸಾಮಾಗ್ರಿಗಳು: ಮಂಡಕ್ಕಿ, ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ, ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ, ಕಡ್ಲೆ, ಕೊತ್ತಂಬರಿ

ಮಾಡುವ ವಿಧಾನ: ಮೊದಲು ದೊಡ್ಡ ಬಾಣಲೆಯೊಂದನ್ನು ಒಲೆಯ ಮೇಲೆ ಇಡಿ. ಇದಕ್ಕೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ ಬಾಡಿಸಿ, ಆನಂತರ ಕಡ್ಲೆಬೇಳೆ, ಶೇಂಗಾ ಹಾಕಿ, ಕ್ರಿಸ್ಪಿ ಆಗೋವರೆಗೂ ಬಿಡಿ. ಕಡೆಗೆ ಹಸಿಮೆಣಸು, ಈರುಳ್ಳಿ ಹಾಕಿ, ಉಪ್ಪು, ಅರಿಶಿಣ ಕೂಡ ಹಾಕಿ. ಈರುಳ್ಳಿ ಮೆತ್ತಗಾದ ನಂತರ ಟೊಮ್ಯಾಟೊ ಹಾಕಿ, ಅದು ಕೂಡ ಸಾಫ್ಟ್‌ ಆಗಲಿ. ತದನಂತರ ಗರಂ ಮಸಾಲಾ ಬೇಕಿದ್ದರೆ ಹಾಕಿ. ನಂತರ ಒಂದು ಬೌಲ್‌ನಲ್ಲಿ ನೀರು ಇಟ್ಟುಕೊಳ್ಳಿ. ಇದಕ್ಕೆ ಮಂಡಕ್ಕಿ ಹಾಕಿ, ಮಂಡಕ್ಕಿ ನೆನೆದ ನಂತರ ವಾಪಾಸ್‌ ತೆಗೆದುಕೊಂಡು ನೀರನ್ನು ಹಿಂಡಿ. ಆನಂತರ ಇದನ್ನು ಗೊಜ್ಜಿಗೆ ಹಾಕಿ, ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಕಡ್ಲೆ ಹಾಗೂ ಜೀರಿಗೆಯನ್ನು ಪುಡಿ ಮಾಡಿಕೊಂಡು, ಆ ಪುಡಿಯನ್ನೂ ಇದಕ್ಕೆ ಹಾಕಿ ಮಿಕ್ಸ್‌ ಮಾಡಿ ಕೊತ್ತಂಬರಿ ಸೊಪ್ಪು ಉದುರಿಸಿ. ಇದಕ್ಕೆ ಮಿಕ್ಸ್ಚರ್‌ ಹಾಕಿಕೊಂಡು ತಿನ್ನಬಹುದು. ಕಾಯಿತುರಿ ಕೂಡ ರುಚಿ ಹೆಚ್ಚಿಸುತ್ತದೆ.

ಮಿರ್ಚಿ ಬೋಂಡಕ್ಕೆ ಬೇಕಾಗುವ ಸಾಮಾಗ್ರಿಗಳು: ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸೋಂಪು, ಸೋಡಾ, ಉಪ್ಪು, ನೀರು, ಖಾರದಪುಡಿ, ಮೆಣಸಿನ ಕಾಯಿ, ಎಣ್ಣೆ

ಮಾಡುವ ವಿಧಾನ: ಮೊದಲು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾಯಲು ಬಿಡಿ. ನಂತರ ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದಪುಡಿ, ಗರಂ ಮಸಾಲಾ, ಸೋಡಾ, ಸೋಂಪು ನೀರು ಹಾಕಿ ಕೈಯಲ್ಲೇ ಕಲಸಿ, ಇದಕ್ಕೆ ಮೆಣಸಿನಕಾಯಿಯನ್ನು ಅದ್ದಿ, ಕಾದ ಎಣ್ಣೆಗೆ ಬಿಡಿ, ಗೋಲ್ಡನ್‌ ಬ್ರೌನ್‌ ಆದ್ರೆ ಬಜ್ಜಿ ರೆಡಿ.

ಮಂಡಕ್ಕಿ ಹಾಗೂ ಬಜ್ಜಿ ಎರಡನ್ನೂ ಒಟ್ಟಿಗೇ ತಿಂದು ಸವಿಯಿರಿ, ಜೊತೆಯಲ್ಲಿ ಒಂದು ಲೋಟ ಚಹಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !