August 5, 2026
Wednesday, August 5, 2026
spot_img

ಸಿಎಂ ಮಾತನಾಡುವ ವೇಳೆ ʼಡಿ ಬಾಸ್‌ʼ ಎಂದು ಕೂಗಿದ ಜನ! ಗರಂ ಆದ ಡಿಕೆಶಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಮನಗರದ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಭಾಷಣ ಆರಂಭಿಸಿದ ವೇಳೆ ಜನ ಡಿ ಬಾಸ್‌ ಎಂದು ನಿರಂತರವಾಗಿ ಕೂಗಿದ್ದು, ಸಿಎಂ ಸಿಟ್ಟಿಗೆ ಕಾರಣವಾಗಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ನಟ ದರ್ಶನ್‌ ಅಭಿಮಾನಿಗಳು ಸಿಎಂ ಮಾತು ಆರಂಭಿಸಿದ ತಕ್ಷಣವೇ ಡಿ ಬಾಸ್‌ ಎಂದು ಕೂಗಿದ್ದಾರೆ. ಮೈಕ್‌ ಹಿಡಿದ ತಕ್ಷಣವೇ ಘೋಷಣೆ ಆರಂಭವಾಗಿದೆ. ಸಿಎಂ ಅದನ್ನು ಇಗ್ನೋರ್‌ ಮಾಡಿ ಮಾತು ಆರಂಭಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ಮಾತು ನಿಲ್ಲಿಸಿದ ಡಿಕೆಶಿ

ಮೈಕ್‌ ಹಿಡಿದ ತಕ್ಷಣವೇ ಜನ ಡಿ ಬಾಸ್‌ ಎಂದು ಕೂಗಿದಾಗ ಸಿಟ್ಟು ಬಂದರೂ ಸಿಎಂ ಡಿಕೆಶಿ ಸುಮ್ಮನೆಯೇ ಇದ್ದರು. ಕೆಲ ಹೊತ್ತು ಭಾಷಣ ಮಾಡದೇ ಇರುವುದು ಒಳಿತು ಎಂದು ನಿರ್ಧರಿಸಿ ಮೈಕ್‌ ಬದಿಗಿಟ್ಟರು. ಜನರನ್ನು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.

ನಿಮ್ಮ ಭಾವನೆ ಅರ್ಥವಾಯ್ತು

ಕೆಲ ಸಮಯದ ನಂತರ ಮೈಕ್‌ ಹಿಡಿದ ಸಿಎಂ ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ನಟ ದರ್ಶನ್‌ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ನಾನು ಬಂದಿರುವ ಕಾರ್ಯಕ್ರಮ ಎಂಥದ್ದು? ಈ ವೇದಿಕೆ ಎಂಥದ್ದು? ಇಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನನಗೆ ಗೊತ್ತಿದೆ. ಎಲ್ಲರೂ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ.

ನಾನಿಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ!

ಇದು ಪವಿತ್ರವಾದ ಜಾಗ, ನಾನು ಸಿಎಂ ಇರಬಹುದು ಆದರೆ ಈ ರಾಮನಗರದ ಮಗ. ನಿಮ್ಮ ಮಗನಿಗೆ ಯಾವ ಸಂದರ್ಭದಲ್ಲಿ ಏನನ್ನು ಕೇಳಬೇಕು ಅನ್ನೋದು ಗೊತ್ತಿಲ್ಲವಾದರೆ ಹೇಗೆ? ನಿಮ್ಮ ಮಗನನ್ನು ನೀವು ಕಾಪಾಡಬೇಕು. ದರ್ಶನ್‌ ವಿಚಾರಕ್ಕೆ ನನಗೆ ಒತ್ತಡ ತರಬೇಡಿ. ಇದು ಇಲ್ಲಿ ಮಾತನಾಡುವ ವಿಷಯ ಅಲ್ಲ. ಇದು ಕಾನೂನಿಗೆ ಸಂಬಂಧಿಸಿದ್ದು. ಹೆಚ್ಚೆಂದರೆ ದೇವರಲ್ಲಿ ಪ್ರಾರ್ಥನೆ ಮಾಡಬಹುದು. ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗೋದಿಲ್ಲ ಎಂದಿದ್ದಾರೆ.

ಪದೇ ಪದೆ ಕುರ್ಚಿಯಿಂದ ಎದ್ದ ಸಿಎಂ

ಕಾರ್ಯಕ್ರಮದ ವೇಳೆ ಹಲವು ಬಾರಿ ಮಾತನಾಡಲು ಬರುವುದು, ಜನರ ಘೋಷಣೆ ಕೇಳಿ ವಾಪಾಸ್‌ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಡೀ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಈ ರೀತಿ ಗೌರವ ನೀಡದೇ ಇದ್ದರೆ ಅದು ಸರಿಯಲ್ಲ ಎಂದು ಜನ ಕಮೆಂಟ್‌ ಮಾಡ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !