August 6, 2026
Thursday, August 6, 2026
spot_img

ನಾರಾಯಣಸ್ವಾಮಿಗೆ ದಕ್ಕದ ಸಚಿವ ಸ್ಥಾನ: ಇಂದು ಬಂಗಾರಪೇಟೆ ಬಂದ್‌ಗೆ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಗಾರಪೇಟೆಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿಗೆ ಸಚಿವ ಸ್ಥಾನ ದಕ್ಕದ್ದಕ್ಕೆ ಅಸಮಾಧಾನ ಭುಗಿಲೆದ್ದಿದ್ದು, ಇಂದು ಬಂಗಾರಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ನಂಬಿಕಾರ್ಹ ಮೂಲಗಳ ಪ್ರಕಾರ ನಾರಾಯಣಸ್ವಾಮಿ ಅವರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಇತ್ತ ಆಕ್ರೋಶಗೊಂಡ ಕಾರ್ಯಕರ್ತರು ಮಾತ್ರ ಸಚಿವ ಸ್ಥಾನ ನೀಡುವವರೆಗೂ ಹೋರಾಟ ನಿಲ್ಲಿಸೋದಿಲ್ಲ ಎಂದಿದ್ದಾರೆ.

ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಬಂದ್‌!

ಬಲಗೈ ಸಮುದಾಯಕ್ಕೆ ಸೇರಿದ ಎಸ್.ಎನ್.ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಂಪುಟದಲ್ಲಿ ಅವಕಾಶ ನೀಡದೆ ಹೈಕಮಾಂಡ್ ಅನ್ಯಾಯ ಮಾಡಿದೆ. 2013, 2018 ಮತ್ತು 2023ರಲ್ಲಿ ಕಾಂಗ್ರೆಸ್ ಶಾಸಕರಾಗಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದರೂ ಯಾರಿಗೂ ಸಚಿವ ಸ್ಥಾನ ನೀಡದೆ ಬೇಸರ ಮೂಡಿಸಿದೆ. ಈ ಹಿನ್ನಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ.

ಯಾರೆಲ್ಲಾ ಬೆಂಬಲ?

ದಲಿತ ಸಂಘಟನೆಗಳು, ವರ್ತಕರ ಸಂಘ, ಆಟೋ ಚಾಲಕರ ಸಂಘ, ರೈತ ಸಂಘ ಇದಕ್ಕೆ ಬೆಂಬಲ ಸೂಚಿಸಿದೆ. ಇನ್ನು ಬಸ್‌ ಹಾಗೂ ಆಟೋ ಸಂಚಾರ ಅನುಮಾನವಾಗಿದೆ. ಮಕ್ಕಳು ಶಾಲೆಗೆ ಎಂದಿನಂತೆ ತೆರಳಿದ್ದು, ಪರಿಸ್ಥಿತಿ ಕೈ ಮೀರುವ ಮುನ್ನ ಮಕ್ಕಳನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದಂತೆ ಎಲ್ಲ ಬಂದ್ ಮಾಡಲು ಮುಖಂಡರು ನಿರ್ಧಾರಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಂಗಾರಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಿ ರ‍್ಯಾಲಿ ಕೈಗೊಳ್ಳಲಿದ್ದಾರೆ.

ಹಾವೇರಿಯಲ್ಲೂ ಪ್ರತಿಭಟನೆ

ಇನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಶಾಸಕ ಬಸವರಾಜ್‌ ಶಿವಣ್ಣನವರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಂದು ಪ್ರತಿಭಟನೆಗೆ ಬೆಂಬಲಿಗರು ಮುಂದಾಗಿದ್ದಾರೆ. ಇನ್ನು ನಿನ್ನೆಯಷ್ಟೇ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಬೆಂಬಲಿಗರು ಮೂರು ತಾಲೂಕುಗಳನ್ನು ಬಂದ್‌ ಮಾಡಿ ಸಿಟ್ಟು ತೋರಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !