August 6, 2026
Thursday, August 6, 2026
spot_img

ಆನ್‌ಲೈನ್‌ನಲ್ಲೇ ತಂದೆಯ ಅಂತಿಮ ಸಂಸ್ಕಾರ: ಮಾನವೀಯತೆ ಕಳೆದುಕೊಂಡ ಬಾಂಧವ್ಯದ ಕಹಿ ಸತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಇಡೀ ಜೀವನವನ್ನು ಮೂವರು ಹೆಣ್ಣುಮಕ್ಕಳ ಏಳಿಗೆ ಮತ್ತು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು, ಪುತ್ರಿಯರು ಅಂತಿಮ ದರುಶನಕ್ಕೂ ಬಾರದೇ ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ಹರ್ಯಾಣದ ಸೋನಿಪತ್‌ನಲ್ಲಿ ನಡೆದಿದೆ.

ಮೂಲತಃ ಮುಂಬೈನ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಅವರು ಕಳೆದ ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿ ನೆಲೆಸಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಮುಂಜಾನೆ ನಿಧನರಾದರು. ಇವರ ಮೂವರು ಪುತ್ರಿಯರಲ್ಲಿ ಅನಿತಾ ನೇಪಾಳದಲ್ಲಿ, ನಿಶಾ ಉತ್ತರ ಪ್ರದೇಶದ ಅಜಂಘಡ್‌ನಲ್ಲಿ ಹಾಗೂ ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ.

ವಿಡಿಯೋ ಕಾಲ್ ಮೂಲಕವೇ ನೆರವೇರಿದ ಅಂತಿಮ ಸಂಸ್ಕಾರ

ಗುಪ್ತಾ ಅವರ ನಿಧನದ ಸುದ್ದಿ ತಿಳಿಸಿದರೂ ಬರಲು ಸಮಯವಿಲ್ಲ ಎಂದು ಪುತ್ರಿಯರು ತಿಳಿಸಿದರು. ನೇಪಾಳದಲ್ಲಿದ್ದ ಹಿರಿಯ ಮಗಳು ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸಿ ಕಾರ್ಯ ಪೂರ್ಣಗೊಳಿಸಲು ಕೋರಿದ್ದರು. ಅಂತಿಮವಾಗಿ ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿತು. ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ 20 ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರೂ ಮಕ್ಕಳು ಬರದಿರುವುದು ಮತ್ತು ವಿಡಿಯೋ ಕರೆಯಲ್ಲಿದ್ದ ಮಗಳೊಬ್ಬಳು ಬೇಗ ಕಾರ್ಯ ಮುಗಿಸಲು ಕೋರಿದ್ದು ಆಶ್ರಮದ ಸಿಬ್ಬಂದಿಗೆ ತೀವ್ರ ಬೇಸರ ತಂದಿದೆ.

ಸಾವಿನಲ್ಲೂ ಸಾರ್ಥಕತೆ: ಇಬ್ಬರ ಬಾಳಿಗೆ ಬೆಳಕಾದ ನೇತ್ರದಾನ

ಈ ದುಃಖದ ನಡುವೆಯೂ ಕುಟುಂಬಸ್ಥರು ಮತ್ತು ಆಡಳಿತ ಮಂಡಳಿಯವರು ಅತ್ಯಂತ ಶ್ಲಾಘನೀಯ ನಿರ್ಧಾರ ಕೈಗೊಂಡಿದ್ದಾರೆ. ಶಿವಚರಣ್ ಅವರ ಅಂತಿಮ ಇಚ್ಛೆ ಹಾಗೂ ಕುಟುಂಬದ ಸಮ್ಮತಿಯಂತೆ ಅವರ ನೇತ್ರಗಳನ್ನು ದಾನ ಮಾಡಲಾಯಿತು. ಶಿವಚರಣ್ ಅವರ ನೇತ್ರದಾನದಿಂದಾಗಿ ಇಂದು ಇಬ್ಬರು ದೃಷ್ಟಿಹೀನ ವ್ಯಕ್ತಿಗಳಿಗೆ ಹೊಸ ಬೆಳಕು ಲಭಿಸಿದೆ.

ಸಮಾಜಕ್ಕೆ ಮಾದರಿಯಾದ ವೃದ್ಧಾಶ್ರಮದ ಮಾನವೀಯತೆ

ತಂದೆಯ ಅಸ್ಥಿಯನ್ನು ಗಂಗಾನದಿಯಲ್ಲಿ ವಿಸರ್ಜಿಸಲು ಕುಟುಂಬಸ್ಥರು ವಿನಂತಿಸಿದ್ದು, ವೃದ್ಧಾಶ್ರಮದ ಸಿಬ್ಬಂದಿಯೇ ಈ ಕಾರ್ಯವನ್ನು ಪೂರ್ಣಗೊಳಿಸಲಿದ್ದಾರೆ. ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಮತ್ತು ಸ್ಥಳೀಯರು ಅನಾಥ ಭಾವನೆ ಬಾರದಂತೆ ಶಿವಚರಣ್ ಅವರ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಿ ಸಮಾಜಕ್ಕೆ ಮಾನವೀಯತೆಯ ಸಂದೇಶ ಸಾರಿದ್ದಾರೆ.

ಬಾಂಧವ್ಯದ ಕಹಿ ಸತ್ಯ

ವೃತ್ತಿಬದುಕು, ಜೀವನ ಶೈಲಿ ಮತ್ತು ವಿದೇಶಿ ಉದ್ಯೋಗಗಳ ಒತ್ತಡದಿಂದಾಗಿ ಇಂದಿನ ಯುವ ಪೀಳಿಗೆ ಕುಟುಂಬದವರಿಂದ ದೂರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತಂದೆ-ತಾಯಂದಿರ ಅಂತಿಮ ಸಂಸ್ಕಾರವನ್ನು ಮಕ್ಕಳು ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್ ಮೂಲಕ ವೀಕ್ಷಿಸುವ ವಾತಾವರಣ ನಿರ್ಮಾಣವಾಗಿದೆ. ಹುಟ್ಟಿಸಿ ಬೆಳೆಸಿದ ಹೆತ್ತವರ ಕೊನೆಯ ಕ್ಷಣದಲ್ಲೂ ಜೊತೆಗಿರಲು ಸಾಧ್ಯವಾಗದಿರುವುದು ಆಧುನಿಕ ಸಮಾಜ ಎದುರಿಸುತ್ತಿರುವ ಅತಿದೊಡ್ಡ ಕಹಿ ಸತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !