ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ.
12 ದಿನಗಳು ನಡೆಯುವ ಈ ಹೂವಿನ ಹಬ್ಬಕ್ಕೆ ‘ಗಂಗರ ಸಾಮ್ರಾಜ್ಯದ 1,000 ವರ್ಷಗಳ ವೈಭವ’ ಎಂಬ ಶೀರ್ಷಿಕೆ ನೀಡಲಾಗಿದೆ. ಲಾಲ್‌ಬಾಗ್‌ನ ಪ್ರಸಿದ್ಧ ಗ್ಲಾಸ್ ಹೌಸ್‌ನಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಬೃಹತ್ ವಿಗ್ರಹ ಹಾಗೂ ತಲಕಾಡಿನ ಐತಿಹಾಸಿಕ ದೇವಾಲಯಗಳ ಆಕರ್ಷಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. 2.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ. ಲಾಲ್‌ಬಾಗ್ ಕೆರೆಯ ಬಳಿ ನಯನಮನೋಹರ ಕೃತಕ ಜಲಪಾತ ಮತ್ತು ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ.
ಆನ್‌ಲೈನ್ ಟಿಕೆಟ್
ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನೋಡಲು ಬರುವ ಜನ ಟಿಕೆಟ್ ಕೌಂಟರ್‌ನಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗುತ್ತದೆ. ಇದನ್ನು ತಪ್ಪಿಸಲು ಈ ಬಾರಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹೆಚ್ಚುವರಿ ಪಾರ್ಕಿಂಗ್ ಕೂಡ ಇದೆ. ಆದಷ್ಟು ಜನರು ಮೆಟ್ರೋದಲ್ಲಿ ಆಗಮಿಸುವುದು ಉತ್ತಮವಾಗಿದೆ. ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಟಿಕೆಟ್ ದರ ಎಷ್ಟು?
ಲಾಲ್‌ಬಾಗ್ ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆವರೆಗೆ ತೆರದಿರುತ್ತದೆ. ವೀಕ್‌ಡೇಗಳಲ್ಲಿ ವಯಸ್ಕರಿಗೆ 80 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿಯ ಟಿಕೆಟ್ ಪಡೆಯಬೇಕಾಗುತ್ತದೆ. ಇನ್ನು ವೀಕೆಂಡ್‌ನಲ್ಲಿ ವಯಸ್ಕರಿಗೆ 100 ರೂಪಾಯಿ ಇರಲಿದೆ. ಮಕ್ಕಳ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಮಕ್ಕಳಿಗೆ ಸಮವಸ್ತ್ರ ಹಾಕಿಸಿಕೊಂಡು ಬಂದರೆ ಪ್ರವೇಶ ಉಚಿತವಾಗಿರಲಿದೆ.



