October 13, 2026
Tuesday, October 13, 2026
spot_img

ದೆಹಲಿ ಪಾದಯಾತ್ರೆ ವಿಡಿಯೋ ವೈರಲ್: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಕೌಂಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಸೋಮವಾರ ನಡೆದ ಪ್ರತಿಭಟನಾ ಪಾದಯಾತ್ರೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಕುರ್ತಾದ ಕಾಲರ್ ಹಿಡಿದು ಹಿಂದೆ ತಳ್ಳಿದ್ದಾರೆ ಎನ್ನಲಾದ ವೈರಲ್ ವಿಡಿಯೋ ವಿವಾದದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಿಲ್ಲ, ಬದಲಿಗೆ ಭಾರೀ ಜನಸ್ತೋಮವಿದ್ದ ಕಾರಣ ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಹಿಂದಿನ ವಾಹನವನ್ನು ಹತ್ತುವಂತೆ ಸೂಚಿಸಿದರು ಎಂದು ಹೇಳುವ ಮೂಲಕ ಶಿವಕುಮಾರ್ ಅವರು ಬಿಜೆಪಿಯ ಆಪಾದನೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಪೋಸ್ಟ್: ತಾರಕಕ್ಕೇರಿದ ವಿವಾದ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ವಿವಾದಕ್ಕೆ ದೊಡ್ಡ ತಿರುವು ನೀಡಿದ್ದರು. ಇದನ್ನು “ಸಾರ್ವಜನಿಕ ಅಪಮಾನ” ಎಂದು ಬಣ್ಣಿಸಿದ್ದ ಶರ್ಮಾ, 2015 ರಲ್ಲಿ ಅಸ್ಸಾಮಿಗರ ಸ್ವಾಭಿಮಾನಕ್ಕಾಗಿ ನಾನು ಇಂತಹದೇ ಅಪಮಾನವನ್ನು ಸಹಿಸದೇ ಕಾಂಗ್ರೆಸ್ ತೊರೆದಿದ್ದೆ. ಕರ್ನಾಟಕದ ಮುಖ್ಯಮಂತ್ರಿ ಎನ್ನುವುದು ಕೇವಲ ವ್ಯಕ್ತಿಯಲ್ಲ, ಅದೊಂದು ಸಾಂವಿಧಾನಿಕ ಹುದ್ದೆ ಹಾಗೂ ಸಮೃದ್ಧ ಸಂಸ್ಕೃತಿ ಮತ್ತು ಇತಿಹಾಸವಿರುವ ಭವ್ಯ ರಾಜ್ಯದ ಮುಖಪುಟ. ಇಂತಹ ಸಾರ್ವಜನಿಕ ಅವಮಾನಕ್ಕೆ ಶಿವಕುಮಾರ್ ಅವರು ತಲೆಬಾಗುತ್ತಾರೆಯೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, ಬಿಜೆಪಿಗೆ ನನ್ನ ಮೇಲೆ ಅಪಾರ ಪ್ರೀತಿ ಇದ್ದಂತಿದೆ, ಅದಕ್ಕಾಗಿಯೇ ಅವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ಯಾರೂ ನನ್ನನ್ನು ತಳ್ಳಿಲ್ಲ ಎಂದು ಲೇವಡಿ ಮಾಡಿದ್ದಾರೆ.

7 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದ ಬಿವೈವಿ

ಇತ್ತ ಕರ್ನಾಟಕ ಬಿಜೆಪಿಯು ಈ ಘಟನೆಯನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಇದು 7 ಕೋಟಿ ಕನ್ನಡಿಗರ ಘನತೆಗೆ ಹಾಗೂ ಸ್ವಾಭಿಮಾನಕ್ಕೆ ಕಾಂಗ್ರೆಸ್ ನಾಯಕತ್ವ ಮಾಡಿದ ಘೋರ ಅವಮಾನ. ರಾಹುಲ್ ಗಾಂಧಿ ಅವರ ಅಹಂಕಾರಕ್ಕೆ ಇದು ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ;

ಸಮರ್ಥನೆ ನೀಡಿದ ಉಪಮುಖ್ಯಮಂತ್ರಿ

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಬೃಹತ್ ಪ್ರತಿಭಟನೆಗಳ ವೇಳೆ ಜನಸಂದಣಿಯನ್ನು ನಿಯಂತ್ರಿಸುವುದು ಅತ್ಯಂತ ಕಷ್ಟಕರವಾದ ಕೆಲಸ. ಭದ್ರತಾ ಸಿಬ್ಬಂದಿಯ ಮೊದಲ ಆದ್ಯತೆ ರಾಹುಲ್ ಗಾಂಧಿ ಅವರಿಗೆ ರಕ್ಷಣೆ ನೀಡುವುದಾಗಿತ್ತು. ಆ ರಕ್ಷಣಾ ವಲಯದ ಬಳಿಗೆ ಶಿವಕುಮಾರ್ ಅವರು ಹೋದಾಗ ಜನಸಂದಣಿಯ ಒತ್ತಡದಿಂದಾಗಿ ಸ್ವಲ್ಪ ತಳ್ಳಾಟ ನಡೆದಿದೆಯೇ ಹೊರತು ಅಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಕ್ರಮ ಖಂಡಿಸಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನತ್ತ ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವದ ಪಾದಯಾತ್ರೆ’ ವೇಳೆ ಈ ಘಟನೆ ನಡೆದಿತ್ತು.

Must Read