ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಷಾಢ ಮಾಸದ ಕಡೆಯ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದೆ.
ಆಷಾಢ ಮಾಸ ಆರಂಭದಿಂದಲೂ ಪ್ರತೀ ಶುಕ್ರವಾರ ದೇವಿಗೆ ವಿಭಿನ್ನ ಅಲಂಕಾರಗಳನ್ನು ಮಾಡಲಾಗಿತ್ತು. ಶುಕ್ರವಾರದಂದು ಮೈಸೂರಿಗೆ ಭಕ್ತರಸಾಗರ ಹರಿದು ಬಂದಿದ್ದು, ದೇವಿಯ ದರುಶನದಿಂದ ಭಕ್ತರು ಪುನೀತರಾಗಿದ್ದರು. ಇಂದು ಆಷಾಢ ಮಾಸದ ಕಡೆಯ ಶುಕ್ರವಾರವಾಗಿದ್ದು, ಈಗಾಗಲೇ ದೇಗುಲದ ಮುಂದೆ ಭಕ್ತರು ನೆರೆದಿದ್ದಾರೆ.
ಬ್ರಾಹ್ಮೀ ಮಹೂರ್ತದಿಂದಲೇ ಭಕ್ತರು ರಸ್ತೆ ಮಾರ್ಗವಾಗಿ ಬಂದರೆ, ಕೆಲವರು ರಸ್ತೆ ಮೂಲಕ ಆಗಮಿಸಿ ದೇವಿಯ ದರುಶನ ಪಡೆದಿದ್ದಾರೆ. ಸಂಜೆಯೊಳಗೆ ಸಾವಿರಾರು ಮಂದಿ ದೇವಿಯ ದರುಶನ ಪಡೆಯುವ ನಿರೀಕ್ಷೆ ಇದೆ. ಇಡೀ ದೇಗುಲ ಮಧುಮಗಳಂತೆ ಕಂಗೊಳಿಸುತ್ತಿದ್ದು, ದೇವಸ್ಥಾನದ ಒಳಾಂಗಣವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಇನ್ನು ದೇಗುಲಕ್ಕೆ ಕಾಲಿಡುತ್ತಿದ್ದಂತೆಯೇ ಧೂಪ, ಕರ್ಪೂರ ಹಾಗೂ ಗಂಧದ ಘಮ ಮೂಗಿಗೆ ಬಡಿಯುತ್ತದೆ. ಭಕ್ತರು ಶಾಂತರೀತಿಯಲ್ಲಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರುಶನ ಪಡೆಯುತ್ತಿದ್ದಾರೆ.
ವಿವಿಐಪಿ ದರುಶನಕ್ಕೆ ಎರಡು ಸಾವಿರ ರೂಪಾಯಿ
ಎರಡು ಸಾವಿರ ರೂಪಾಯಿ ಮೌಲ್ಯದ ಟಿಕೆಟ್ ಪಡೆದವರಿಗೆ ನೇರ ದರುಶನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಬಳಿಕ ದರುಶನಕ್ಕೆ ಅವಕಾಶ ನೀಡಲಾಗಿದ್ದು, ಇಂದು ಬೆಳಗ್ಗೆ 5:30 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗಿದೆ.



