October 2, 2026
Friday, October 2, 2026
spot_img

ವೀಕೆಂಡ್ ಟ್ರಾವೆಲ್‌ಗೆ ‘ನಮ್ಮ ಮೆಟ್ರೋ’ ಸಾಥ್: ಶನಿವಾರ ತಡರಾತ್ರಿವರೆಗೂ ರೈಲು ಸೇವೆ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುದೀರ್ಘ ವಾರಾಂತ್ಯದ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಸಾಧ್ಯತೆಯಿರುವುದರಿಂದ, ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸೇವೆಯ ಸಮಯವನ್ನು ವಿಸ್ತರಿಸಿದೆ.

ಅಕ್ಟೋಬರ್ 3ರ ಶನಿವಾರ ನಗರದ ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ ತಡರಾತ್ರಿವರೆಗೂ ರೈಲುಗಳು ಸಂಚರಿಸಲಿದ್ದು, ಹಳದಿ ಮಾರ್ಗದಲ್ಲಿ ಆರ್‌.ವಿ. ರಸ್ತೆ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 1.15ಕ್ಕೆ ಹೊರಡಲಿದೆ.

ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ಕೊನೆಯ ರೈಲು ಮಧ್ಯರಾತ್ರಿ 12 ಗಂಟೆಗೆ ಹೊರಡಲಿದೆ. ಮತ್ತೊಂದೆಡೆ, ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 12.20ಕ್ಕೆ ಸಂಚಾರ ಆರಂಭಿಸಲಿದೆ. ಹಸಿರು ಮಾರ್ಗದಲ್ಲಿ ಮಾದಾವರ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 12.15ಕ್ಕೆ ಹಾಗೂ ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣದಿಂದ ರಾತ್ರಿ 12.20ಕ್ಕೆ ಕೊನೆಯ ರೈಲು ಹೊರಡಲಿದೆ.

ಹಳದಿ ಮಾರ್ಗದಲ್ಲಿಯೂ ಪ್ರಯಾಣಿಕರಿಗೆ ತಡರಾತ್ರಿಯವರೆಗೆ ಸೇವೆ ಲಭ್ಯವಾಗಲಿದೆ. ಆರ್‌.ವಿ. ರಸ್ತೆ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 1.15ಕ್ಕೆ ಹೊರಡಲಿದ್ದು, ಡೆಲ್ಟಾ ಎಲೆಕ್ಟ್ರಾನಿಕ್ಸ್–ಬೊಮ್ಮಸಂದ್ರ ನಿಲ್ದಾಣದಿಂದ ರಾತ್ರಿ 11.55ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಮೆಟ್ರೋ ಮಾರ್ಗಗಳ ನಡುವೆ ಸಂಪರ್ಕ ಕಲ್ಪಿಸುವ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ದಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12.55ಕ್ಕೆ ಹೊರಡಲಿದೆ.

ಇದನ್ನೂ ಓದಿ:

ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಕೌಂಟರ್‌ಗಳಲ್ಲಿ ಉಂಟಾಗಬಹುದಾದ ಸರದಿಯನ್ನು ತಪ್ಪಿಸಲು ಕ್ಯೂಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ ಎನ್‌ಸಿಎಂಸಿ ಕಾರ್ಡ್ ಬಳಸುವಂತೆ ಬಿಎಂಆರ್‌ಸಿಎಲ್ ಸಲಹೆ ನೀಡಿದೆ.

ಸುದೀರ್ಘ ವಾರಾಂತ್ಯದಲ್ಲಿ ಬಸ್‌ಗಳು ಮತ್ತು ರಸ್ತೆಗಳ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆಯ ನಡುವೆ, ತಡರಾತ್ರಿವರೆಗಿನ ಮೆಟ್ರೋ ಸೇವೆ ನಗರ ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಆಯ್ಕೆಯನ್ನು ಒದಗಿಸಲಿದೆ. ಸಮಯ ವಿಸ್ತರಣೆಯ ಸದುಪಯೋಗ ಪಡೆದು ಪ್ರಯಾಣಿಕರು ಮುಂಚಿತವಾಗಿ ತಮ್ಮ ಕೊನೆಯ ರೈಲಿನ ಸಮಯವನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವುದು ಸೂಕ್ತ.

Must Read