ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಬಂತು ಅಂದ್ರೆ ಸಾಕು… ಬೆಂಗಳೂರಿನ ಸಾವಿರಾರು ಜನರ ಮೊದಲ ಪ್ಲಾನ್ ನಂದಿಬೆಟ್ಟ. ತಂಪಾದ ಗಾಳಿ, ಮೋಡಗಳ ನಡುವೆ ಸೂರ್ಯೋದಯ ನೋಡಬೇಕು ಅನ್ನೋ ಭಾನುವಾರದ ಪ್ಲ್ಯಾನ್ ಮಾಡಿಕೊಂಡಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಿ. ಈ ಬಾರಿ ನಿಮ್ಮ ಟ್ರಿಪ್‌ಗೆ ಜಿಲ್ಲಾಡಳಿತ ತಾತ್ಕಾಲಿಕ ಬ್ರೇಕ್ ಹಾಕಿದೆ.
ವಾರಾಂತ್ಯದ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ತೆರಳಲು ಯೋಜಿಸಿರುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಆಗಸ್ಟ್ 9ರಂದು ನಡೆಯಲಿರುವ ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್ ಹಿನ್ನೆಲೆಯಲ್ಲಿ ಕಾರಹಳ್ಳಿ ಕ್ರಾಸ್‌ನಿಂದ ನಂದಿಬೆಟ್ಟದವರೆಗಿನ ರಸ್ತೆಯಲ್ಲಿ ಎಲ್ಲಾ ಸಾಮಾನ್ಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾರ್ಯಕ್ರಮ ಸುಗಮವಾಗಿ ನಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಯಾವ ಸಮಯದಲ್ಲಿ ವಾಹನ ಸಂಚಾರ ಬಂದ್?
ಜಿಲ್ಲಾಡಳಿತದ ಆದೇಶದಂತೆ ಆಗಸ್ಟ್ 8ರ ರಾತ್ರಿ 11 ಗಂಟೆಯಿಂದ ಆಗಸ್ಟ್ 9ರ ಮಧ್ಯಾಹ್ನ 12 ಗಂಟೆಯವರೆಗೆ ನಂದಿಬೆಟ್ಟ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಈ ಅವಧಿಯಲ್ಲಿ ಮ್ಯಾರಥಾನ್‌ಗೆ ಸಂಬಂಧಿಸಿದ ಅಧಿಕೃತ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಮ್ಯಾರಥಾನ್‌ಗೆ ಭರ್ಜರಿ ಸಿದ್ಧತೆ
ಈ ವರ್ಷದ ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುಮಾರು 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ನೆರವೇರಿಸಲಿದ್ದಾರೆ. ಸ್ಪರ್ಧಿಗಳ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ:
ಪ್ರವಾಸಿಗರು ಗಮನಿಸಬೇಕಾದುದು
ಮ್ಯಾರಥಾನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಹಾಗೂ ಆಯೋಜಕರಿಗೆ ಮಾತ್ರ ವಿಶೇಷ ಪಾಸ್‌ಗಳನ್ನು ನೀಡಲಾಗಿದ್ದು, ಆ ವಾಹನಗಳಿಗೆ ಮಾತ್ರ ಪ್ರವೇಶ ಸಿಗಲಿದೆ. ಉಳಿದ ಪ್ರವಾಸಿಗರು ತಮ್ಮ ಪ್ರವಾಸವನ್ನು ಬೇರೆ ದಿನಕ್ಕೆ ಮುಂದೂಡುವುದು ಅಥವಾ ಸಂಚಾರ ನಿರ್ಬಂಧ ತೆರವಾದ ನಂತರವೇ ನಂದಿಬೆಟ್ಟಕ್ಕೆ ತೆರಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತದ ಮನವಿ
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾರ್ವಜನಿಕರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಬೇಕು. ಅನಗತ್ಯವಾಗಿ ನಂದಿಬೆಟ್ಟದತ್ತ ಪ್ರಯಾಣಿಸದೇ, ಸಂಚಾರ ನಿಯಮಗಳನ್ನು ಅನುಸರಿಸುವ ಮೂಲಕ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



