ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಬ್ಬ ಮನುಷ್ಯನಿಗೂ ಇಷ್ಟು ಬಾರಿ ಉಸಿರಾಟ ಎಂದು ವಿಧಿ ಮೊದಲೇ ನಿಗದಿಸಿದಂತೆ, ಪ್ರತಿಯೊಬ್ಬ ಮನುಷ್ಯನಿಗೂ ಅವನ ಜೀವಿತಾವಧಿಯಲ್ಲಿ ಇಷ್ಟು ಆಹಾರ ಸ್ವೀಕರಿಸಬಹುದು ಎಂದು ವಿಧಿ ಬರೆದಿರುತ್ತದೆ. ದೀರ್ಘ ಉಸಿರಾಟದ ಮೂಲಕ ಹೆಚ್ಚು ಕಾಲ ಜೀವಿಸಬಹುದು. ಹಾಗೆಯೇ ಅಗತ್ಯಕ್ಕಿಂತ ಹೆಚ್ಚೆಚ್ಚು ಆಹಾರ ಸ್ವೀಕರಿಸಿದಂತೆ ಅವನು ಮೃತ್ಯುವಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾ ಸಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಶುಕ್ರವಾರದ ’ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.
ಅನ್ನವೇ ಮೃತ್ಯು ಹಾಗೂ ಅನ್ನವೇ ಜೀವನಕ್ಕೆ ಕಾರಣ ಎಂದು ಭಾರತೀಯ ಶಾಸ್ತ್ರಗಳು ಹೇಳಿವೆ. ಆಹಾರವನ್ನು ಸರಿಯಾಗಿ ಬಳಸಿದಾಗ ಅದು ಜೀವಕ್ಕೆ ಪೂರಕ ಮತ್ತು ವ್ಯತಿರಿಕ್ತವಾಗಿ ಬಳಸಿದಾಗ ಅದೇ ಸಾವಿಗೆ ಕಾರಣವಾಗುತ್ತದೆ. ಬೋಧಾಯನರು ಧರ್ಮಸೂತ್ರಗಳಲ್ಲಿ ಭೋಜನವನ್ನು ಯಜ್ಞ ಎಂದಿದ್ದು, ಶಂಕರಾಚಾರ್ಯರು ತಮ್ಮ ಪ್ರಪಂಚಸಾರ ತಂತ್ರದಲ್ಲಿ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ. ಆಯುರ್ವೇದ ತಜ್ಞರಾದ ಚರಕ – ಸುಶೃತರೂ ಕೂಡ ಭೋಜನವನ್ನು ಯಜ್ಞ ಎಂದು ಕರೆದಿದ್ದು, ಉಪನಿಷತ್ತುಗಳೂ ಕೂಡ ಭೋಜನವನ್ನು ಯಜ್ಞ ಎಂದಿವೆ ಎಂದು ಶ್ರೀಗಳು ತಿಳಿಸಿದರು.

ನಮ್ಮೊಳಗಿರುವ ಜಠರಾಗ್ನಿಯೇ ಅಗ್ನಿಯಾಗಿದ್ದು, ನಾವು ಮಾಡುವ ಊಟವೇ ಇದಕ್ಕೆ ಅರ್ಪಿಸುವ ಹವಿಸ್ಸಾಗಿದೆ. ನಮಗೇ ಎಂದು ಕೊಳ್ಳದೇ ನಮ್ಮೊಳಗಿರುವ ಪರಮಾತ್ಮನಿಗೆ ಎಂದು ಊಟವನ್ನು ವಿಧಿವತ್ತಾಗಿ ಸೇವಿಸಿದಾಗ ಅದು ನಿಜವಾಗಿ ಯಜ್ಞವೇ ಆಗುತ್ತದೆ. ಸರಿಯಾದ ಕ್ರಮ ಹಾಗೂ ಹೊತ್ತಿನಲ್ಲಿ ಮಾಡುವ ಭೋಜನವು ಅಗ್ನಿಹೋತ್ರವೇ ಆಗುತ್ತದೆ. ಈ ಕುರಿತಾಗಿ ಪ್ರಾಣಾಗ್ನಿಹೋತ್ರೋಪನಿಷತ್ ಎಂಬ ಉಪನಿಷತ್ತೇ ಇದ್ದು, ಇದು ಆಹಾರದ ವಿಧಿ – ನಿಷೇಧಗಳನ್ನು ಹಾಗೂ ಅದರಂತೆ ನಡೆದುಕೊಂಡಾಗ ಆಗುವ ವಿವಿಧ ಲಾಭಗಳನ್ನು ತಿಳಿಸುತ್ತದೆ ಎಂದು ಸ್ವಾಮೀಜಿ ವಿವರಿಸಿದರು.
ಭೋಜನವನ್ನು ಸ್ವೀಕರಿಸುವಾಗ ಭಾವವೇ ಪ್ರಧಾನವಾಗಿದ್ದು, ಜೊತೆಗೆ ಯಾವ ಕಾಲದಲ್ಲಿ, ಯಾವ ಸ್ಥಳದಲ್ಲಿ, ಯಾವ ಪ್ರಮಾಣದಲ್ಲಿ ಹಾಗೂ ಯಾವುದನ್ನು ಊಟಮಾಡಬೇಕು ಎಂದು ಸರಿಯಾಗಿ ತಿಳಿದು ಆಹಾರವನ್ನು ಸ್ವೀಕರಿಸಿದಾಗ ಅದು ಯಜ್ಞಕ್ಕಿಂತ ಕಡಿಮೆಯಲ್ಲ ಎಂದು ಶ್ರೀಗಳು ನಿರೂಪಿಸಿದರು.
ಊಟವನ್ನು ಹೇಗೆ ಮಾಡಬೇಕು?
ನಮಗಾಗಿ ಎಂದು ಆಹಾರವನ್ನು ತಯಾರಿಸಬಾರದು. ಅತಿಥಿಗಳು, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಹಾಗೂ ಕಷ್ಟದಲ್ಲಿ ಇರುವವರಿಗೆ ಆಹಾರವನ್ನು ನೀಡಬೇಕು. ಆನಂತರವಷ್ಟೇ ನಾವು ಆಹಾರವನ್ನು ಸ್ವೀಕರಿಸಬೇಕು. ಹೀಗೆ ಮಾಡದೇ, ನಾವೇ ಮೊದಲು ಊಟ ಮಾಡಿದರೆ ಅದು ಪಾಪವಾಗಿ ತಾಪದಿಂದ ನಮ್ಮನ್ನೇ ಸುಡುತ್ತದೆ ಎಂದು ಹೇಳಲಾಗಿದೆ. ಇದು ಪ್ರಾಚೀನ ಭಾರತದ ಶಾಸ್ತ್ರಕಾರರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ ಎಂದರು.

ಕುಲಾಂತರಿ ಗೋಧಿ ಪ್ರಾಣಾಂತಕವಾಗಬಹುದು
ಗೋಧೂಮ ಎಂದು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಗೋಧಿ ಇಂದು ತನ್ನ ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಇಂದು ಸಿಗುವ ಗೋಧಿ ಸಂಪೂರ್ಣ ರೂಪಾಂತರಗೊಂಡಿದೆ. ಕೃಷಿತೋಟದಲ್ಲಿ ಕ್ರಿಮಿಗಳಿಂದ ರಕ್ಷಿಸಲು ಗೋಧಿಯನ್ನು ರೂಪಾಂತರ ಮಾಡಲಾಗಿದ್ದು, ಇಂದು ಸಿಗುವ ಗೋಧಿಯನ್ನು ಮನುಷ್ಯನು ತಿನ್ನಲು ಯೋಗ್ಯವೇ? ಎಂದು ಪ್ರಶ್ನಿಸುವಂತಾಗಿದೆ. ಕೆಟ್ಟ ಗೋಧಿಯನ್ನು ಮತ್ತಷ್ಟು ಕೆಡಿಸಿರುವ ವಸ್ತುವೇ ಮೈದಾ. ಅದು ಮನುಷ್ಯನ ಜೀರ್ಣಾಂಗದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆ. ಜೀರ್ಣಕ್ಕೆ ಕಷ್ಟವಾಗುವ ಆಹಾರವನ್ನು ತಿನ್ನಬಾರದು ಎಂದು ಅಭಿಪ್ರಾಯಪಟ್ಟರು.
ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳಿಂದ ಆಶೀರ್ವಾದ ಪಡೆದರು. ಚಂದ್ರಶೇಖರ ದಂಟಿನಮನೆ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿದರು.
ಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಭಂಡಾರಿ ಸಮಾಜದ ಅಧ್ಯಕ್ಷ ಶಿವು ಭಂಡಾರಿ, ಸುಬ್ರಾಯ ಭಂಡಾರಿ ಮನುವಳ್ಳಿ, ಹರಿಹರ ಭಂಡಾರಿ ಕಡತೋಕ ಸೇರಿದಂತೆ ಭಂಡಾರಿ ಸಮಾಜದ ನೂರಾರು ಗುರುಬಂಧುಗಳು ಪಾದುಕಾ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಜಿ.ವಿ. ಹೆಗಡೆ, ಸತೀಶ ಭಟ್ಟ ಧಾರೇಶ್ವರ, ದಿನ ಪ್ರಧಾನರಾದ ಪಾದೇಕಲ್ಲು ವಿಷ್ಣು ಭಟ್ ದಂಪತಿಗಳು ಉಪಸ್ಥಿತರಿದ್ದರು.



