ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಮಾಡಲು ಪೊಲೀಸರು ಪಣತೊಟ್ಟಿದ್ದು, ಇಂದು ಬೆಳಗ್ಗೆ ವೈಟ್ಫೀಲ್ಡ್ನಲ್ಲಿ ಮೆಗಾ ಕಾರ್ಯಾಚರಣೆ ನಡೆಸಿದ್ದಾರೆ. ʼಆಪರೇಷನ್ ಮುಕ್ತʼ ಹೆಸರಿನ ಶೋಧ ಇದಾಗಿದ್ದು, ಬೆಳಗ್ಗೆ ಐದು ಗಂಟೆಯಿಂದಲೇ ಹಲವು ಪ್ರದೇಶಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವೈಟ್ಫೀಲ್ಡ್, ಕಾಡುಗೋಡಿ, ಮಾರತ್ತಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಶೆಡ್ಗಳಲ್ಲಿ ವಾಸಿಸುವ ಜನರೇ ಟಾರ್ಗೆಟ್!
ಮುಖ್ಯವಾಗಿ ಶೆಡ್ಗಳಲ್ಲಿ ವಾಸಿಸುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವೈಟ್ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಡಿಸಿಪಿ, ಇಬ್ಬರು ಎಸಿಪಿಗಳು ಹಾಗೂ ಆರು ಇನ್ಸ್ಪೆಕ್ಟರ್ಗಳು ಸೇರಿದಂತೆ ಸುಮಾರು 500 ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ಒಟ್ಟಾರೆ 30 ಸ್ಥಳಗಳಲ್ಲಿ ಶೋಧ
ಕೆಲಸಕ್ಕೆ ತೆರಳುವ ಮುನ್ನವೇ ಶೆಡ್ಗಳಿಗೆ ತೆರಳಿದ ಪೊಲೀಸರು ಅಲ್ಲಿ ವಾಸಿಸುತ್ತಿದ್ದವರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಮೂಲ ದಾಖಲೆಗಳನ್ನು ಪರಿಶೀಲಿಸಿ ಅನುಮಾನ ಬಂದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವೈಟ್ಫೀಲ್ಡ್ನ ಸುತ್ತಮುತ್ತ ಶೆಡ್ಗಳಲ್ಲಿ ವಾಸಿಸುತ್ತಿದ್ದ ಜನರು ಹೌಸ್ಕೀಪಿಂಗ್, ಪ್ಲಾಸ್ಟಿಟ್ ಕೆಲಸ ಹಾಗೂ ಇನ್ನಿತರ ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಇವರ ದಾಖಲೆಯನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಶಂಕಿತ ಬಾಂಗ್ಲಾದೇಶಿ ಪ್ರಜೆಗಳು ವಶಕ್ಕೆ
ಈವರೆಗೂ ಪೊಲೀಸರು ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ವರ್ತೂರು ಠಾಣೆಯಲ್ಲಿ 40ಕ್ಕೂ ಹೆಚ್ಚು ಮಂದಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ.ಅಕ್ರಮವಾಗಿ ದೇಶದಲ್ಲಿ ನೆಲೆಸಿರುವವರನ್ನು ಪತ್ತೆಹಚ್ಚಿ ಅವರ ಹಿನ್ನೆಲೆ ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ಪೊಲೀಸರು ಶೋಧ ಹಾಗೂ ವಿಚಾರಣೆ ಮುಂದುವರಿಸಿದ್ದಾರೆ.



