ಹೊಸದಿಗಂತ ವರದಿ ಹಾಸನ :
ಹಗಲು ಕಾಫಿ ತೋಟಗಳಲ್ಲಿ ವಿಶ್ರಾಂತಿ ಪಡೆದು, ರಾತ್ರಿ ವೇಳೆ ಗ್ರಾಮಗಳತ್ತ ನುಗ್ಗುತ್ತಿರುವ ಒಂಟಿ ಕಾಡಾನೆಯೊಂದು ಜಿಲ್ಲೆಯ ಮಲೆನಾಡ ಭಾಗದಲ್ಲಿ ಆತಂಕ ಸೃಷ್ಟಿಸಿದ್ದು, ಜೀವಭಯದಲ್ಲಿ ಗ್ರಾಮಸ್ಥರು ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಒಂಟಿ ಕಾಡಾನೆ ಕಂಡ ಕಂಡವರ ಮೇಲೆ ದಾಳಿಗೆ ಯತ್ನಿಸುತ್ತಿದ್ದು, ವಾಹನಗಳ ಮೇಲೂ ದಾಳಿ ನಡೆಸುತ್ತಿದೆ. ಬೇಲೂರು ತಾಲೂಕಿನ ಅರೇಹಳ್ಳಿ ವ್ಯಾಪ್ತಿಯ ಕಿತ್ತಾವರ ಗುಡ್ಡ ಹಾಗೂ ಕಾಫಿ ಎಸ್ಟೇಟ್ ಪ್ರದೇಶದಲ್ಲಿ ಹಗಲು ವೇಳೆ ಅಡಗಿಕೊಂಡು, ರಾತ್ರಿ ಕಾಫಿ ತೋಟಗಳ ಮೂಲಕ ಗ್ರಾಮಗಳತ್ತ ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆ.ಪಿ.ಕಾಲರ್-2 ಕಾಡಾನೆ ಗುಂಪಿನಿಂದ ಬೇರ್ಪಟ್ಟು ಒಂಟಿಯಾಗಿ ಓಡಾಡುತ್ತಿರುವ ಈ ಗಂಡಾನೆಯನ್ನು ಅರಣ್ಯ ಇಲಾಖೆ ಕೆ.ಪಿ.ಕಾಲರ್-2 ಎಂದು ಗುರುತಿಸಿದೆ. ಹಲವು ದಿನಗಳ ಹಿಂದೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಇದೀಗ ರೇಡಿಯೋ ಕಾಲರ್ ಇಲ್ಲದ ಕಾರಣ ಅದರ ಚಲನವಲನವನ್ನು ನೇರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.
ಕಾರಿನ ಮೇಲೆ ಏಕಾಏಕಿ ದಾಳಿ
ಆ.2ರಂದು ತಡರಾತ್ರಿ ಬೆಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದೊಲಮನೆ ಗ್ರಾಮದ ಕಾಫಿ ಬೆಳೆಗಾರ ಮೊಹಮ್ಮದ್ ಝಾಯಿದ್ ಕುಟುಂಬ ಕಾರಿನಲ್ಲಿ ಮನೆಗೆ ಮರಳಿತ್ತು. ಕಾರನ್ನು ಶೆಡ್‌ನಲ್ಲಿ ನಿಲ್ಲಿಸಿ ಇಳಿಯುತ್ತಿದ್ದ ವೇಳೆ ಮನೆಯ ಬಳಿಯೇ ಅಡಗಿದ್ದ ಕಾಡಾನೆ ಏಕಾಏಕಿ ಕಾರಿನ ಹಿಂಭಾಗಕ್ಕೆ ದಾಳಿ ಮಾಡಿದೆ. ಕೋರೆಯಿಂದ ಕಾರನ್ನು ಚುಚ್ಚಿ ಎತ್ತಿ ಎಸೆಯಲು ಯತ್ನಿಸಿದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ತಂದೆ, ತಾಯಿ, ಅಕ್ಕ ಹಾಗೂ ಮಕ್ಕಳು ಭಯಭೀತರಾಗಿ ಕಿರುಚಿಕೊಂಡಿದ್ದಾರೆ. ಬಳಿಕ ಕಾಡಾನೆ ತೋಟದೊಳಗೆ ತೆರಳಿದ್ದರಿಂದ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧರ್ಮರಾಜು ಸಾವಿಗೆ ಕಾಡಾನೆ ಕಾರಣ?
ಜು.29ರಂದು ಕಣಗುಪ್ಪೆ ಗ್ರಾಮದ ರೈತ ಧರ್ಮರಾಜು ಅವರನ್ನು ಬಲಿ ಪಡೆದ ಕಾಡಾನೆಯೇ ಕಿತ್ತಾವರ ಭಾಗದಲ್ಲಿ ಓಡಾಡುತ್ತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯ ಹೆಜ್ಜೆ ಗುರುತು ಹಾಗೂ ಚಲನವಲನಗಳನ್ನು ಪರಿಶೀಲಿಸಿದ್ದಾರೆ. ಈಗಾಗಲೇ ಮಾನವ ಜೀವ ಬಲಿಯಾಗಿರುವ ಪ್ರದೇಶದಲ್ಲಿ ಅಪಾಯಕಾರಿ ಒಂಟಿ ಕಾಡಾನೆಯ ಓಡಾಟ ಹೆಚ್ಚಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಸಂಜೆಯಾದ ಬಳಿಕ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯಪಡುತ್ತಿದ್ದಾರೆ. ಕಿತ್ತಾವರದ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರ ಮೇಲೆಯೂ ಕಾಡಾನೆ ದಾಳಿಗೆ ಯತ್ನಿಸಿದೆ. ಕಾಡಾನೆಯನ್ನು ಶೀಘ್ರ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಸ್ಥಳೀಯರು ಹೇಳೋದೇನು?
ಆ.2ರ ತಡರಾತ್ರಿ ನಮ್ಮ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ ಎಂದು ದೊಲಮನೆ ಮೊಹಮ್ಮದ್ ಝಾಯಿದ್ ಹೇಳಿದ್ದು, ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಕಾಡಾನೆಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅರೇಹಳ್ಳಿಯ ಮೆಹಬೂಬ್ ಷರೀಫ್ ಹೇಳಿದ್ದಾರೆ. ಇನ್ನು ಬೇಲೂರಿನ ಆರ್‌ಎಫ್‌ಒ ಯತೀಶ್ ಬಿ.ಜಿ ಮಾತನಾಡಿ, ಕಿತ್ತಾವರ ಭಾಗದಲ್ಲಿ ಓಡಾಡುತ್ತಿರುವ ಕಾಡಾನೆ ಸದ್ಯ ಮಸ್ತಿಯಲ್ಲಿದೆ. ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಕೆ.ಪಿ.ಕಾಲರ್-2ಕ್ಕೆ ರೇಡಿಯೋ ಕಾಲರ್ ಅಳವಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.



