August 8, 2026
Saturday, August 8, 2026
spot_img

ವೀಕೆಂಡ್‌ ಖುಷಿಗೆ ನಂದಿಬೆಟ್ಟಕ್ಕೆ ಹೋಗ್ತಿದ್ದೀರಾ? ಏಳು ಗಂಟೆಗಳ ಕಾಲ ಎಂಟ್ರಿ ಇಲ್ವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೀಕೆಂಡ್‌ ಬಂತೆಂದರೆ ರಾಜಧಾನಿ ಬೆಂಗಳೂರು ಖಾಲಿಯಾಗಿಬಿಡುತ್ತದೆ. ವಾರವಿಡೀ ಕೆಲಸ ಮಾಡಿದ ಒತ್ತಡವನ್ನು ಹೋಗಲಾಡಿಸಲು ಜನ ವೀಕೆಂಡ್‌ ಸುತ್ತಾಟಕ್ಕೆ ಮುಗಿಬೀಳ್ತಾರೆ. ಇದರಲ್ಲಿ ಜನರ ಮೋಸ್ಟ್‌ ಫೇವರೆಟ್‌ ಜಾಗ ಅಂದ್ರೆ ನಂದಿಬೆಟ್ಟ! ನಾಳೆ ನಂದಿಬೆಟ್ಟಕ್ಕೆ ಪ್ಲಾನ್‌ ಮಾಡ್ತಾ ಇದ್ರೆ ಈ ಸುದ್ದಿ ಸಂಪೂರ್ಣವಾಗಿ ಓಡಿ..

ನಂದಿಬೆಟ್ಟದಲ್ಲಿ ಈ ಬಾರಿ ಮಾನ್ಸೂನ್‌ ಮ್ಯಾರಥಾನ್‌ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಂಜಾನೆ ಮೂರು ಗಂಟೆಯಿಂದ ಬೆಳಗ್ಗೆ ಹತ್ತು ಗಂಟೆಯವರೆಗೆ ಪ್ರವಾಸಿಗರ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಎಲ್ಲ ವಾಹನಗಳಿಗೆ ನಿರ್ಬಂಧ

ನಂದಿಬೆಟ್ಟದ ಪಾದದಿಂದ ಬೆಟ್ಟದ ಮೇಲಕ್ಕೆ ಹೋಗುವ ಎಲ್ಲಾ ರೀತಿಯ ಖಾಸಗಿ ವಾಹನಗಳ (ಬೈಕ್ ಮತ್ತು ಕಾರುಗಳು) ಸಂಚಾರವನ್ನು ನಿರ್ಬಂಧಿಸಲಾಗಿದೆ. ಅದರಂತೆ, ಮ್ಯಾರಥಾನ್ ಮುಗಿಯುವವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಬೆಟ್ಟದ ರಸ್ತೆಗೆ ಪ್ರವೇಶಿಸುವಂತಿಲ್ಲ.

ಏನಿದು ಮಾನ್ಸೂನ್‌ ಮ್ಯಾರಥಾನ್‌?

ನಂದಿಬೆಟ್ಟದಲ್ಲಿ 21 ಕಿಲೋಮೀಟರ್, 10 ಕಿಲೋಮೀಟರ್ ಮತ್ತು 5 ಕಿಲೋಮೀಟರ್ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಮ್ಯಾರಥಾನ್‌ನಲ್ಲಿ 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ನಂದಿಬೆಟ್ಟದ ಪಾದದಿಂದ ಆರಂಭವಾಗಿ ಕಡಿದಾದ ತಿರುವುಗಳ ರಸ್ತೆಯ ಮೂಲಕ ಬೆಟ್ಟದ ಮೇಲ್ಭಾಗದವರೆಗೂ ಓಟಗಾರರು ಸಾಗಲಿದ್ದಾರೆ. ಈ ಮ್ಯಾರಥಾನ್‌ಗೆ ಡಿಸಿಎಂ ಜಿ. ಪರಮೇಶ್ವರ ಚಾಲನೆ ನೀಡಲಿದ್ದಾರೆ.

ಸೂರ್ಯೋದಯ ನೋಡೋಕೆ ಸಿಗೋದಿಲ್ಲ

ಬೆಳಗ್ಗೆ 10:00 ಗಂಟೆಯ ನಂತರ ಮ್ಯಾರಥಾನ್ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಎಂದಿನಂತೆ ಪ್ರವಾಸಿಗರು ಬೆಟ್ಟದ ಮೇಲಕ್ಕೆ ಹೋಗಲು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಸೂರ್ಯೋದಯ ನೋಡುವ ಆಸೆಯೊಂದಿಗೆ ನಂದಿಬೆಟ್ಟಕ್ಕೆ ಆಗಮಿಸಿ ವಾಪಾಸ್‌ ಹೋಗಬೇಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !