October 12, 2026
Monday, October 12, 2026
spot_img

ಪುರಾಣ ಎಂಬುದು ವೇದಾಂತದ ತತ್ವಸಾರ ಸರಳವಾಗಿ ತಿಳಿಸುವ ಮಾಧ್ಯಮ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುರಾಣಗಳು ಕೇವಲ ಹಳೆಯ ಕಥೆಗಳಲ್ಲ, ಬದುಕಿನ ಜಂಜಾಟಗಳಿಂದ ಮುಕ್ತರಾಗಲು ಮಾರ್ಗದರ್ಶನ ನೀಡುವ ಜ್ಞಾನದ ಭಂಡಾರಗಳಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

ಪುರಾಣಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ವಿಚಾರಗಳನ್ನು ಒಳಗೊಂಡಿವೆ ಎಂದು ತಿಳಿಸಿದರು. ವೇದಾಂತದ ಆಳವಾದ ತತ್ವಗಳನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸುವುದು ಪುರಾಣಗಳ ವಿಶೇಷತೆಯಾಗಿದೆ ಎಂದರು.

ನಿರ್ಮಲತೆಯೇ ಮುಕ್ತಿಗೆ ಮೆಟ್ಟಿಲು

ವಿಶಾಲವಾದ ಬ್ರಹ್ಮಾಂಡದಲ್ಲಿ ಮನುಷ್ಯನ ಅಸ್ತಿತ್ವ ಚಿಕ್ಕದಾಗಿದ್ದರೂ, ಸೃಷ್ಟಿಯಲ್ಲಿ ನಡೆಯುವ ಬದಲಾವಣೆಗಳು ನಮ್ಮ ಮೇಲೂ ಪರಿಣಾಮ ಬೀರುತ್ತವೆ. ಶರತ್ಕಾಲದಲ್ಲಿ ಪ್ರಕೃತಿ ನಿರ್ಮಲವಾಗಿರುವಂತೆ, ಮನುಷ್ಯನ ಮನಸ್ಸು ಮತ್ತು ಬದುಕಿನಲ್ಲೂ ನಿರ್ಮಲತೆ ನೆಲೆಸಬೇಕು. ಪ್ರಕೃತಿಗೆ ಪೂರಕವಾಗಿ ಬದುಕಿದಾಗ ಅದರ ಸಕಾರಾತ್ಮಕ ಪರಿಣಾಮ ನಮ್ಮ ಮೇಲೂ ಉಂಟಾಗುತ್ತದೆ. ಈ ನಿರ್ಮಲತೆಯೇ ಮುಕ್ತಿಯ ಹಾದಿಯಲ್ಲಿ ಮಹತ್ವದ ಮೆಟ್ಟಿಲಾಗಿದೆ ಎಂದು ಶ್ರೀಗಳು ವಿವರಿಸಿದರು.

ದೇವರ ಸ್ವರೂಪದಲ್ಲಿ ಶಕ್ತಿಗೆ ವಿಶೇಷ ಸ್ಥಾನವಿದ್ದು, ಶಕ್ತಿಯನ್ನು ಹೊರತುಪಡಿಸಿ ದೇವರ ಅಸ್ತಿತ್ವವನ್ನು ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ದೇವಿಯ ಆರಾಧನೆಗೆ ಯಾವುದೇ ಭೇದಭಾವವಿಲ್ಲ. ವೈಷ್ಣವ, ಶಾಕ್ತ, ಗಾಣಪತ್ಯ ಸೇರಿದಂತೆ ವಿವಿಧ ಪಂಥಗಳ ಅನುಯಾಯಿಗಳೂ ದೇವಿಯನ್ನು ಆರಾಧಿಸಬಹುದು. ನವರಾತ್ರಿಯ ಉಪಾಸನೆಯ ಮೂಲಕ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದುರ್ಗಾಮಂಟಪದಲ್ಲಿ ಮೃಣ್ಮಯ ರಾಜರಾಜೇಶ್ವರಿ ದೇವಿಗೆ ಪೂಜೆ, ಶ್ರೀಭದ್ರಕಾಳಿ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ಭಜನಾ ಮಂಡಳಿಗಳಿಂದ ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಸಂಯೋಜಕರಾದ ವಾದಿರಾಜ ಸಾಮಗ, ಶ್ರೀವತ್ಸ ಮುಡಗೋಡು, ದೀಪಕ ಹೆಗಡೆ ಗೋಳಿಕೈ, ಗಾಯತ್ರೀ ಭಾಗ್ವತ್, ಶಿವರಾಜ ಪೆರ್ಮುಖ, ಮಹಾಬಲಗಿರಿ ಕಲ್ಲುಕೊಪ್ಪ, ವಿಠ್ಠಲ ಹೆಗಡೆಕಟ್ಟೆ, ದಿನಪ್ರಧಾನರಾಗಿ ಸತೀಶ ಹೆಗಡೆ ಅಲ್ಮನೆ ದಂಪತಿ ಉಪಸ್ಥಿತರಿದ್ದರು.

Must Read