ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಹಾಗೂ ಸಿತಾರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯ ಮುಖ್ಯಸ್ಥ ನಾಗವಂಶಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾಗಳ ಪೋಸ್ಟರ್ಗಳಲ್ಲಿ ಪ್ರಕಟಿಸುವ ಕಲೆಕ್ಷನ್ ಅಂಕಿಅಂಶಗಳನ್ನು ತುಸು ಹೆಚ್ಚಿಸಿ ತೋರಿಸಲಾಗುತ್ತದೆ ಎಂಬುದನ್ನು ಅವರು ನೇರವಾಗಿ ಒಪ್ಪಿಕೊಂಡಿದ್ದಾರೆ. ನೈಜ ಲೆಕ್ಕಾಚಾರಗಳನ್ನೇ ಪ್ರಕಟಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿರುವ ಅವರು, ಚಿತ್ರರಂಗದಲ್ಲಿ ಈ ರೀತಿಯ ಸಂಪ್ರದಾಯ ಸಾಮಾನ್ಯವಾಗಿದೆ ಎಂದಿದ್ದಾರೆ.
ಅಭಿಮಾನಿಗಳ ಸಂಭ್ರಮಕ್ಕೆ ಆದ್ಯತೆ
ಚಿತ್ರದ ನೈಜ ಗಳಿಕೆಗಿಂತ ಅಭಿಮಾನಿಗಳ ಸಂತೋಷವೇ ಮುಖ್ಯ ಎಂಬುದು ನಾಗವಂಶಿ ಅವರ ಅಭಿಪ್ರಾಯ. ನೆಚ್ಚಿನ ದೊಡ್ಡ ನಾಯಕರ ಸಿನಿಮಾಗಳು ಯಶಸ್ವಿಯಾದಾಗ ಅಭಿಮಾನಿಗಳು ಅದನ್ನು ಸಂಭ್ರಮಿಸುತ್ತಾರೆ. ಅವರ ಈ ಖುಷಿ ಮತ್ತು ಪ್ರೋತ್ಸಾಹವನ್ನು ಹೆಚ್ಚಿಸಲು ಕಲೆಕ್ಷನ್ ಲೆಕ್ಕದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮಾಡಲಾಗುತ್ತದೆ. ಆದರೆ ಈ ಏರಿಕೆಗೂ ಒಂದು ಮಿತಿ ಇರುತ್ತದೆ; ಸುಮಾರು 100 ಕೋಟಿ ಗಳಿಸಿದ ಚಿತ್ರವನ್ನು 110 ಕೋಟಿ ಎಂದು ಪ್ರಚಾರ ಮಾಡಬಹುದೇ ಹೊರತು, ಏಕಾಏಕಿ 200 ಕೋಟಿ ಎಂದು ದೊಡ್ಡ ಮಟ್ಟದ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ರ್ಯಾಕಿಂಗ್ ವೆಬ್ಸೈಟ್ ಮತ್ತು ಪೋಸ್ಟರ್ ವ್ಯತ್ಯಾಸ
ಇತ್ತೀಚೆಗೆ ನಿರ್ಮಾಣ ಸಂಸ್ಥೆಗಳ ಪೋಸ್ಟರ್ ಹಾಗೂ ಸ್ಯಾಕ್ನಿಲ್ಕ್ನಂತಹ ಸ್ವತಂತ್ರ ಟ್ರ್ಯಾಕಿಂಗ್ ವೆಬ್ಸೈಟ್ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ. ಉದಾಹರಣೆಗೆ, ನಾಗವಂಶಿ ನಿರ್ಮಾಣದ ‘ಡಾಕು ಮಹಾರಾಜ್’ ಚಿತ್ರದ ಮೊದಲ ದಿನದ ಗಳಿಕೆಯನ್ನು ಸಂಸ್ಥೆ 56 ಕೋಟಿ ಎಂದು ಪ್ರಕಟಿಸಿದರೆ, ಟ್ರ್ಯಾಕರ್ಸ್ 41.24 ಕೋಟಿ ಎಂದಿದ್ದರು. ಹಾಗೆಯೇ ‘ಕಿಂಗ್ಡಮ್’ ಚಿತ್ರದ ಗಳಿಕೆಯಲ್ಲೂ ಸಂಸ್ಥೆ ಪ್ರಕಟಿಸಿದ 82 ಕೋಟಿ ಹಾಗೂ ಟ್ರ್ಯಾಕರ್ಸ್ ಅಂದಾಜಿಸಿದ 65.76 ಕೋಟಿ ನಡುವೆ ವ್ಯತ್ಯಾಸವಿತ್ತು.
ಸಿನಿಮಾ ಉದ್ಯಮಕ್ಕೆ ಪ್ರೋತ್ಸಾಹ
ಈ ರೀತಿಯ ಕಲೆಕ್ಷನ್ ಪ್ರಚಾರಗಳು ಚಿತ್ರರಂಗದಲ್ಲಿ ಧನಾತ್ಮಕ ವಾತಾವರಣವನ್ನು ನಿರ್ಮಿಸುತ್ತವೆ. ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಸಿನಿಮಾ ಕುರಿತು ಕೌತಕವನ್ನು ಹೆಚ್ಚಿಸಿ, ಹೆಚ್ಚು ಜನರು ಚಿತ್ರಮಂದಿರಕ್ಕೆ ಬರುವಂತೆ ಪ್ರೇರೇಪಿಸುತ್ತವೆ. ಚಿತ್ರದ ಗೆಲುವನ್ನು ಸಂಭ್ರಮಿಸುವುದು ಮತ್ತು ಚಿತ್ರೋದ್ಯಮಕ್ಕೆ ಹೊಸ ಕಳೆ ತರುವುದು ಈ ಪ್ರಚಾರ ತಂತ್ರದ ಮುಖ್ಯ ಉದ್ದೇಶವಾಗಿದೆ.



