ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಶನಿವಾರ ಮೊದಲ ಬಾರಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ಖಾತೆಯನ್ನು ಆರಂಭಿಸುವ ಮೂಲಕ ಡಿಜಿಟಲ್ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್ನಲ್ಲೇ ಅವರು ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಲ್ಲದೆ, ನವೆಂಬರ್ 10 ರಂದು ಬಿಡುಗಡೆಯಾಗಲಿರುವ ತಮ್ಮ ಚೊಚ್ಚಲ ಪುಸ್ತಕ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ನ ಕಿರುನೋಟದ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. “ಕೇಂಬ್ರಿಡ್ಜ್ನ ಒಂದು ಸಣ್ಣ ಗ್ರೀಕ್ ರೆಸ್ಟೋರೆಂಟ್ನಲ್ಲಿ ನನ್ನ ಪ್ರೀತಿಯ ಪಯಣ ಆರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಹಾಗೂ ಸುಂದರ ನೆನಪುಗಳಿಂದ ತುಂಬಿದ ನಮ್ಮದೇ ಆದ ಜಗತ್ತನ್ನು ಸೃಷ್ಟಿಸಿದೆವು. ಆ ಜಗತ್ತನ್ನು ನವೆಂಬರ್ 10ರಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಸೋನಿಯಾ ಬರೆದುಕೊಂಡಿದ್ದಾರೆ.
ಗ್ರೀಕ್ ರೆಸ್ಟೋರೆಂಟ್ನ ಆ ಭೇಟಿ
ಸುಮಾರು ಎರಡು ನಿಮಿಷಗಳ ಆ ಅಪರೂಪದ ವಿಡಿಯೋದಲ್ಲಿ ಇಂಗ್ಲೆಂಡ್ನ ತಮ್ಮ ಹಳೆಯ ದಿನಗಳ ಬಗ್ಗೆ ಮಾತನಾಡಿರುವ ಸೋನಿಯಾ ಗಾಂಧಿ, “ಆ ದಿನಗಳಲ್ಲಿ ಇಂಗ್ಲೆಂಡ್ನಲ್ಲಿ ಸಿಗುತ್ತಿದ್ದ ಆಹಾರ ನನಗೆ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ, ತುಂಬಾ ಸಪ್ಪೆಯಾಗಿರುತ್ತಿತ್ತು. ಇವತ್ತಿನ ತರಹ ಅಲ್ಲಿ ಅಷ್ಟೊಂದು ರೆಸ್ಟೋರೆಂಟ್ಗಳೂ ಇರಲಿಲ್ಲ. ನನ್ನ ಇಟಾಲಿಯನ್ ಶೈಲಿಯ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ನಮಗೆ ಕೇಂಬ್ರಿಡ್ಜ್ನಲ್ಲಿದ್ದ ‘ವರ್ಸಿಟಿ ರೆಸ್ಟೋರೆಂಟ್’ ಎಂಬ ಗ್ರೀಕ್ ಹೋಟೆಲ್ ಪತ್ತೆಯಾಯಿತು” ಎಂದಿದ್ದಾರೆ. ಅಲ್ಲಿಗೆ ಸಾಕಷ್ಟು ಯುರೋಪಿಯನ್ ಹಾಗೂ ಭಾರತೀಯ ವಿದ್ಯಾರ್ಥಿಗಳು ಊಟಕ್ಕೆ ಬರುತ್ತಿದ್ದರು ಮತ್ತು ಅದೇ ರೆಸ್ಟೋರೆಂಟ್ನಲ್ಲಿ ಸಾಮಾನ್ಯ ಸ್ನೇಹಿತರೊಬ್ಬರ ಮೂಲಕ ರಾಜೀವ್ ಗಾಂಧಿ ಅವರ ಪರಿಚಯವಾಯಿತು ಎಂದು ಅವರು ತಿಳಿಸಿದ್ದಾರೆ.

ಮೊದಲ ನೋಟದಲ್ಲೇ ಮೂಡಿದ್ದ ಒಲವು
ರಾಜೀವ್ ಗಾಂಧಿ ಅವರ ಮೊದಲ ಭೇಟಿಯ ಕ್ಷಣವನ್ನು ನೆನೆದ ಸೋನಿಯಾ, “ಅವರನ್ನು ನೋಡಿದ ತಕ್ಷಣವೇ, ಇವರ ಜೊತೆ ನಾನು ನನ್ನ ಇಡೀ ಜೀವನವನ್ನು ಕಳೆಯಬೇಕು ಎನ್ನುವ ಭಾವನೆ ನನ್ನಲ್ಲಿ ಮೂಡಿತು. ನಂತರ ಅವರ ಮನಸ್ಸಿನಲ್ಲೂ ಅದೇ ಭಾವನೆ ಇತ್ತು ಎಂದು ನನಗೆ ತಿಳಿಯಿತು” ಎಂದು ನಾಚಿ ನಕ್ಕಿದ್ದಾರೆ. “ರಾಜೀವ್ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರಲ್ಲಿದ್ದ ಸೌಮ್ಯ ಸ್ವಭಾವ ನನ್ನ ಮನಸ್ಸನ್ನು ಆಳವಾಗಿ ಮುಟ್ಟಿತು, ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ರಾಜೀವ್ ಅವರ ಗುಣಗಳನ್ನು ಕೊಂಡಾಡಿದ್ದಾರೆ. ನಂತರದ ದಿನಗಳಲ್ಲಿ ಇಬ್ಬರೂ ಸ್ನೇಹಿತರಾಗಿ ಹಬ್ಬ-ಹರಿದಿನಗಳು, ವ್ಯಾಲೆಂಟೈನ್ಸ್ ಪಾರ್ಟಿಗಳಿಗೆ ಒಟ್ಟಿಗೆ ಹೋಗುತ್ತಿದ್ದ ದಿನಗಳನ್ನು ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ಅಪರೂಪದ ಫೋಟೋಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಟಲಿಯಲ್ಲಿ ಕಳೆದ ಬಾಲ್ಯದ ದಿನಗಳು, ರಾಜೀವ್ ಅವರೊಂದಿಗಿನ ಪ್ರೀತಿ, ಮದುವೆ, ಭಾರತಕ್ಕೆ ಬಂದ ನಂತರ ಎದುರಿಸಿದ ವೈಯಕ್ತಿಕ ನಷ್ಟಗಳು ಹಾಗೂ ಭಾರತದೊಂದಿಗಿನ ಅವರ ಭಾವನಾತ್ಮಕ ಒಡನಾಟದ ಸಂಪೂರ್ಣ ಕಥೆಯನ್ನು ಈ ಪುಸ್ತಕ ಒಳಗೊಂಡಿದೆ. ಫೆಬ್ರವರಿ 25, 1968 ರಂದು ರಾಜೀವ್ ಹಾಗೂ ಸೋನಿಯಾ ಅವರ ವಿವಾಹ ನಡೆದಿತ್ತು.



