August 8, 2026
Saturday, August 8, 2026
spot_img

‘ಟಾಕ್ಸಿಕ್’ ಟ್ರೈಲರ್‌ ರಿಲೀಸ್ ಗೆ ಕೌಂಟ್ ಡೌನ್ ಶುರು: ಬೆಂಗಳೂರಿಗೆ ಬಂದಿಳಿದ ಸ್ಟಾರ್ ನಟ-ನಟಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ಅಭಿಮಾನಿಗಳು ಇಷ್ಟು ದಿನ ಕಾದಿದ್ದ ಆ ಕ್ಷಣಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ! ‘ಟಾಕ್ಸಿಕ್’ ಟ್ರೈಲರ್ ಹೇಗಿರಲಿದೆ? ಯಶ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಸಿನಿಮಾದ ಕಥೆಯ ಬಗ್ಗೆ ಏನಾದರೂ ಸುಳಿವು ಸಿಗುತ್ತಾ? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿವೆ. ಇದರ ನಡುವೆಯೇ ಟ್ರೈಲರ್ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದ್ದು, ‘ಟಾಕ್ಸಿಕ್’ ತಂಡದ ಪ್ರಮುಖ ಸ್ಟಾರ್‌ಗಳು ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಇಂದಿನ ಟ್ರೈಲರ್ ಲಾಂಚ್ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಯಶ್ ಹಳೆಯ ಹೇಳಿಕೆ ಮತ್ತೆ ವೈರಲ್

‘ಕೆಜಿಎಫ್’ ಯಶಸ್ಸಿನ ಬಳಿಕ ಯಶ್ ಅವರಿಗೆ ಬಾಲಿವುಡ್ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ತಾವು ಬೇರೆಡೆಗೆ ಹೋಗುವುದಕ್ಕಿಂತ, ತಾವಿರುವ ಜಾಗಕ್ಕೇ ಎಲ್ಲರನ್ನೂ ಕರೆತರುವುದಾಗಿ ಹೇಳಿದ್ದರು. ಇದೀಗ ‘ಟಾಕ್ಸಿಕ್’ ಚಿತ್ರದಲ್ಲಿ ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಹೇಳಿಕೆ ಮತ್ತೊಮ್ಮೆ ವೈರಲ್ ಆಗಿದೆ.

ಬೆಂಗಳೂರಿಗೆ ಬಂದ ಸ್ಟಾರ್ ಕಲಾವಿದರು

‘ಟಾಕ್ಸಿಕ್’ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರದ ಪ್ರಮುಖ ತಾರೆಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ ಹಾಗೂ ನಯನತಾರಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ನಗರಕ್ಕೆ ಬಂದಿಳಿದಿದ್ದಾರೆ.

ಇದನ್ನೂ ಓದಿ:

ಸ್ಟಾರ್ ನಟ-ನಟಿಯರ ಆಗಮನದಿಂದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಯಶ್ ಈ ಕಾರ್ಯಕ್ರಮದಲ್ಲಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.

‘ಟಾಕ್ಸಿಕ್’ ಚಿತ್ರದ ಅಧಿಕೃತ ಟ್ರೈಲರ್ ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಕಪಾಲಿ ಮಾಲ್‌ನ ಮಲ್ಟಿಪ್ಲೆಕ್ಸ್‌ನಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಕರ್ನಾಟಕದಲ್ಲೂ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಟ್ರೈಲರ್ ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !