ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಪ್ರಮುಖ ಸ್ಟಾರ್ ಹೋಟೆಲ್‌ಗಳ ಅಡುಗೆಮನೆಗಳಲ್ಲಿ ಕೊಳೆತ ಮಾಂಸ, ಹಾಲು ಮತ್ತು ತರಕಾರಿ ಪತ್ತೆಯಾದ ಮರುದಿನವೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (ಎಫ್‌ಡಿಎ) ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಶನಿವಾರದಂದು ಹೋಟೆಲ್‌ಗಳು ಮತ್ತು ಕ್ಯಾಟರರ್‌ಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಪ್ರಮುಖ ಆಹಾರ ಸಂಗ್ರಹಣೆ ಹಾಗೂ ವಿತರಣಾ ಕೇಂದ್ರಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ಜಿಬಿಎ ವ್ಯಾಪ್ತಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಒಟ್ಟು 30 ವಿಶೇಷ ಅಧಿಕಾರಿಗಳ ತಂಡಗಳು ಈ ತಪಾಸಣೆಯನ್ನು ಕೈಗೊಂಡಿದ್ದವು.
70 ಕೆಜಿ ಸಾಸ್, ಪಾನೀಯಗಳು ನಾಶ:
ನಗರದ ಪ್ರಮುಖ ಆಹಾರ ವಿತರಣಾ ಸಂಸ್ಥೆಗಳಾದ ‘ಕೋಲ್ಡ್‌ಮ್ಯಾನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್’ ಮತ್ತು ‘ರಾಧಾಕೃಷ್ಣ ಫುಡ್‌ಲ್ಯಾಂಡ್ ಲಿಮಿಟೆಡ್’ ಕೇಂದ್ರಗಳ ಮೇಲೆ ದಾಳಿ ನಡೆಸಿದಾಗ, ಅವಧಿ ಮುಗಿಯುವ ಹಂತದಲ್ಲಿದ್ದ ಸುಮಾರು 70 ಕೆಜಿ ಸೋಯಾ ಸಾಸ್ ಮತ್ತು ಇತರ ಸಾಸ್‌ಗಳು ಪತ್ತೆಯಾಗಿವೆ. ಅಧಿಕಾರಿಗಳು ತಕ್ಷಣವೇ ಇವುಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ ಎಂದು ಎಫ್‌ಡಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೆ, ಎಕ್ಸ್‌ಪೈರಿ ಡೇಟ್ ಹತ್ತಿರವಿದ್ದ 10 ಲೀಟರ್ ಸ್ಟ್ರಾಬೆರಿ ಫ್ಲೇವರ್ ಹಾಗೂ ಇತರೆ ಪಾನೀಯಗಳನ್ನು ಜಪ್ತಿ ಮಾಡಲಾಗಿದೆ. ಗುಣಮಟ್ಟದ ತಪಾಸಣೆಗಾಗಿ 5 ಮಾಂಸದ ಮಾದರಿಗಳು ಮತ್ತು 13 ಇತರೆ ಆಹಾರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಎರಡೂ ಸಂಸ್ಥೆಗಳು ಬೆಂಗಳೂರಿನ ಹಲವಾರು ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತವೆ ಎಂಬುದು ಉಲ್ಲೇಖಾರ್ಹ.
ಇದನ್ನೂ ಓದಿ:
ಕಠಿಣ ಕಾನೂನು ಕ್ರಮದ ಎಚ್ಚರಿಕೆ:
ಹೋಟೆಲ್‌ಗಳಿಗೆ ಆಹಾರ ಸರಬರಾಜು ಮಾಡುವ ಕೇಂದ್ರಗಳಲ್ಲಿ ಕೋಲ್ಡ್ ಚೈನ್ ನಿರ್ವಹಣೆ, ಶೇಖರಣಾ ಸಾಮರ್ಥ್ಯ ಮತ್ತು ನೈರ್ಮಲ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಈ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಆಪರೇಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.



