ಹೊಸದಿಗಂತ ವರದಿ ವಿಜಯಪುರ:
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಜನ ಗುಳೆ ಹೋಗುತ್ತಿದ್ದಾರೆ, ಜನರ ಸಮಸ್ಯೆಗೆ ರಾಜ್ಯ ಸರ್ಕಾರ ನೆರವಾಗುತ್ತಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿ ಕಾದಾಟದಲ್ಲಿ ಕಳೆದ ಮೂರು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಶತಾಯ ಗತಾಯ ಸಿದ್ದರಾಮಯ್ಯನವರನ್ನ ಕೆಳಗಿಳಿಸಿ ನಾನು ಮುಖ್ಯಮಂತ್ರಿ ಆಗಬೇಕು ಅಂತ ಹೇಳಿ ಡಿ. ಕೆ. ಶಿವಕುಮಾರ್ ಮುಖ್ಯ ಮಂತ್ರಿಯಾಗಿದ್ದಾರೆ ಎಂದರು.
ಜನ ಗುಳೆ ಹೋಗುತ್ತಿದ್ದಾರೆ
ನಮ್ಮ ಲಮಾಣಿ ತಾಂಡಾಗಳು ಖಾಲಿಯಾಗಿವೆ, ಎಸ್ ಸಿ ಕೇರಿಗಳು ಖಾಲಿಯಾಗಿವೆ. ದನಕರುಗಳಿಗೆ ಕುಡಿಯಲಿಕ್ಕೆ ನೀರಿಲ್ಲ, ಮೇವಿಲ್ಲ, ಜನರಿಗೆ ಉದ್ಯೋಗವಿಲ್ಲ. ಹೀಗಾಗಿ ಜನ ಗುಳೆ ಹೋಗ್ತಾ ಇದ್ದಾರೆ ಎಂದು ದೂರಿದರು.
ರೈತರ ಪರಿಸ್ಥಿತಿಯಂತೂ ಮುಂಗಾರು ಹಂಗಾಮಿನಲ್ಲಿ ಮಳೆ ಆಗಬಹುದು ಅಂತ ಆಸೆಯಿಂದ ಬಿತ್ತನೆ ಮಾಡಿದವರದ್ದು. ಬೀಜ ಕೂಡ ಭೂಮಿಯಲ್ಲಿ ಕಮರಿ ಹೋಗಿದೆ. ಒಂದು ಕಡೆ ರೈತರು ಸಾಲಸೋಲ ಮಾಡಿಕೊಂಡವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಹೋಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಇನ್ನೊಂದು ಕಡೆ ಕುರ್ಚಿ ಕಾದಾಟದಲ್ಲಿ ರಾಜ್ಯ ಸರ್ಕಾರ. ಇವತ್ತು ಡಿ. ಕೆ. ಶಿವಕುಮಾರ್ ಅವರು ಎರಡು ತಿಂಗಳಾಯ್ತು ಮುಖ್ಯ ಮಂತ್ರಿಯಾಗಿ. ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಜನರಿಗೆ ಉದ್ಯೋಗ ಕೊಟ್ಟಿಲ್ಲ. ಬರಗಾಲ ಕಾಮಗಾರಿ ಘೋಷಣೆ ಮಾಡಲಿಲ್ಲ. ರೈತರಿಗೆ ಪರಿಹಾರ ಕೊಡಲಿಲ್ಲ ಎಂದರು.
ನಾವು ಅನೇಕ ಬಾರಿ ಒತ್ತಾಯ ಮಾಡಿದ್ದೀವಿ. ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಚಿತ್ರದುರ್ಗಕ್ಕೆ ಬಂದು ಸಭೆ ಮಾಡಿದರೆ ಹೊರತು ಒಂದು ರೂಪಾಯಿ ಕೊಡಲಿಲ್ಲ. ಇವತ್ತು ಇಡೀ ರಾಜ್ಯದಲ್ಲಿ 27 ಜಿಲ್ಲೆಗಳಲ್ಲಿ ಬರ ತಾಂಡವವಾಡ್ತಾ ಇದೆ. ಒಂದೇ ಒಂದು ರೂಪಾಯಿ ಕೊಟ್ಟಿಲ್ಲ ಎಂದರು.
ಒಂದೇ ಒಬ್ಬರಿಗೂ ಕೂಲಿ ಕೆಲಸ ಕೊಟ್ಟಿಲ್ಲ. ಧನಕರುಗಳಿಗೆ ಮೇವು ಬ್ಯಾಂಕ್ ಮಾಡಲಿಲ್ಲ. ಧನಕರುಗಳಿಗೆ ಗೋಶಾಲೆ ಮಾಡಲಿಲ್ಲ. ಇಂತಹ ಒಂದು ಕೆಟ್ಟ ಸರ್ಕಾರವನ್ನು ನನ್ನ 75 ವರ್ಷದ ಜೀವನದಲ್ಲಿ ನಾನು ನೋಡಿಲ್ಲ ಎಂದರು.
ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕೆ ಪೇಮೆಂಟ್
ನಂಜಯ್ಯನಮಠ ತಿಮ್ಮಾಪುರ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಂಡತನದಿಂದ ಇವತ್ತು ವಿಧಾನಸೌಧದಲ್ಲಿ ಕೂತಿದ್ದಾರೆ, ಅದೂ ಹೇಗೆ ಕೂತಿದ್ದಾರೆ?. ಎಲ್ಲ ಪೇಮೆಂಟ್ ಸೀಟ್ ಅಂತ ಹೇಳಿ ಅವರ ಹಿರಿಯ ಶಾಸಕರು, ಮಾಜಿ ಮಂತ್ರಿಗಳೇ ಮಾತಾಡ್ತಾ ಇದ್ದಾರೆ. ಇವತ್ತಿನ ಸರ್ಕಾರ ಅಂದರೆ ಎಲ್ಲ ಪೇಮೆಂಟ್ ಸೀಟ್ ಎಂದು ದೂರಿದರು.
ಬರ ಕಾಮಗಾರಿಗೆ 100 ಕೋಟಿ ಬಿಡುಗಡೆ ಮಾಡಬೇಕು
ಎಲ್ಲಾ ಜಿಲ್ಲೆಗಳಲ್ಲಿ ಬರ ಕಾಮಗಾರಿಗಾಗಿ ಒಂದು 100 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. 100 ಕೋಟಿ ಅಂದರೆ 8-10 ವಿಧಾನಸಭಾ ಕ್ಷೇತ್ರ ಇರುತ್ತವೆ. ಒಂದು ಕ್ಷೇತ್ರಕ್ಕೆ 8-10 ಕೋಟಿ ಬರುತ್ತದೆ. ಅದಕ್ಕೆ ಕೂಡಲೇ ಬಿಡುಗಡೆ ಮಾಡಿ ಗೋಶಾಲೆ ಪ್ರಾರಂಭ ಮಾಡಿ. ಮೇವು ಬ್ಯಾಂಕ್ ಮಾಡಿ ಮತ್ತು ಕೃಷಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಿ. ರೈತರಿಗೆ ಬೆಳೆ ಪರಿಹಾರ ಕೊಡುವಂತಹ ಕೆಲಸವನ್ನು ಕೂಡ ಮಾಡಬೇಕು ಎಂದು ಒತ್ತಾಯಿಸಿದರು.
ಇದರ ಜೊತೆಯಲ್ಲಿ ವಿಮೆಯನ್ನ, ರೈತರು ಇವತ್ತು ಹಣ ಕಟ್ಟಿ ಮಾಡಿಸಿ ಕೊಳ್ಳುವಂತಹ ಪರಿಸ್ಥಿತಿಯೊಳಗೆ ಇಲ್ಲ. ಅದಕ್ಕೆ ಬರಗಾಲದ ಒಂದು ಭಾಗವಾಗಿ ರೈತರ ಪಾಲಿನ ಬೆಳೆ ವಿಮೆಯನ್ನು ಸರ್ಕಾರವೇ ಕಟ್ಟಲಿ ಎಂದರು.
ಸಿದ್ಧರಾಮಯ್ಯ 2013 ರಿಂದ 2018ರ ವರೆಗೂ ಮುಖ್ಯಮಂತ್ರಿಯಾಗಿದ್ದರು. 2023 ರಿಂದ 2026ರ ವರೆಗೆ ಮೂರು ವರ್ಷ ಮುಖ್ಯ ಮಂತ್ರಿಯಾದ್ರು, ಮೂರು ಹಿಂದುಳಿದ ಆಯೋಗಗಳನ್ನು ನೇಮಿಸಿದರು. ಮೊದಲನೆಯದು ಕಾಂತರಾಜ ವರದಿ, ಎರಡನೆಯದ್ದು ಜಯಪ್ರಕಾಶ್ ಹೆಗಡೆ ವರದಿ, ಮೂರನೇ ವರದಿ ಮಧುಸೂದನ್ ವರದಿ ರಾಜೀನಾಮೆ ಕೊಡುವ ಮುನ್ನ ತಗೊಂಡರು. ಯಾವ ವರದಿಯನ್ನು ಜಾರಿ ಮಾಡಲಿಲ್ಲ, ತಿಪ್ಪೆಗೆ ಎಸೆದರು ಎಂದರು.
ಇದನ್ನೂ ಓದಿ:
ಡಿಕೆಶಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ
ಇವತ್ತು ಸಿದ್ದರಾಮಯ್ಯರಿಗೆ ಏಕಾಏಕಿ ಜ್ಞಾನೋದಯ ಆಗಿದೆ. ಕನಸು ಬಿದ್ದಿದೆ ಹಿಂದುಳಿದವರ ಬಗ್ಗೆ. ಹಿಂದುಳಿದವರಿಗೆ ನ್ಯಾಯ ಕೊಡದಿದ್ದರೆ ಹೋರಾಟ ಮಾಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಅರ್ಥ ಡಿ ಕೆ ಶಿವಕುಮಾರ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಸಿದ್ದರಾಮಯ್ಯ ಟೀಮ್ ಮಾಡುತ್ತಿದೆ. ಸಿದ್ಧರಾಮಯ್ಯನವರಾಗಲಿ ಅಥವಾ ಡಿ ಕೆ ಶಿವಕುಮಾರ್ ಕಾಂತರಾಜ ವರದಿಯನ್ನು ಯಾಕೆ ನೀವು ಒಪ್ಪಿಕೊಳ್ಳಲಿಲ್ಲ?, ಜಯಪ್ರಕಾಶ್ ಹೆಗಡೆಯವರ ವರದಿಯನ್ನು ಯಾಕೆ ಒಪ್ಪಿಕೊಳ್ಳಲಿಲ್ಲ?, ಇವತ್ತು ಮಧುಸೂದನದಾಯ್ತು, ನಾಟಕ ಮಾಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದರ ಬದಲಾಗಿ ಅಧಿಕಾರ ಬಂದಾಗ ಮಾಡಿ ತೋರಿಸಬೇಕಾಗಿತ್ತು ಎಂದರು.



