ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಒಟ್ಟಾರೆ ಎಚ್‌ಐವಿ ಹರಡುವಿಕೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದರೂ, 15ರಿಂದ 24 ವರ್ಷ ವಯಸ್ಸಿನವರಲ್ಲಿ ಹೊಸ ಎಚ್‌ಐವಿ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಈ ವಯೋಮಾನದವರಲ್ಲಿ ಹೊಸ ಪ್ರಕರಣಗಳ ಪ್ರಮಾಣ 2022ರಲ್ಲಿ ಶೇ.9ರಷ್ಟಿದ್ದರೆ, 2024ರಲ್ಲಿ ಶೇ.14.2ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಬಿಡುಗಡೆಯಾಗಿರುವ ವರದಿಯಲ್ಲಿ 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಾಖಲಾದ ಹೊಸ ಪ್ರಕರಣಗಳಲ್ಲಿ ಯುವಕರ ಪಾಲು ಶೇ.15.4ಕ್ಕೆ ತಲುಪಿದೆ ಎಂದು ಹೇಳಲಾಗಿದೆ.
ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಪುರುಷರು ವಿಭಾಗದಲ್ಲಿಯೂ ಹೊಸ ಎಚ್‌ಐವಿ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಹೊಸ ಎಚ್‌ಐವಿ ಪ್ರಕರಣಗಳಲ್ಲಿ ಈ ಸಮುದಾಯದ ಪಾಲು ಶೇ.29 ರಷ್ಟಿತ್ತು. 2026ರ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲೇ ಈ ಪ್ರಮಾಣ ಶೇ.31ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಮೂರು ವರ್ಷಗಳಲ್ಲಿ 4,477 ಹೊಸ ಪ್ರಕರಣ
ಕಳೆದ ಮೂರು ವರ್ಷಗಳಲ್ಲಿ ಕೇರಳದಲ್ಲಿ ಒಟ್ಟು 4,477 ಹೊಸ ಎಚ್‌ಐವಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 3,393 ಪುರುಷರು, 1,065 ಮಹಿಳೆಯರು ಹಾಗೂ 19 ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಸೋಂಕಿತರಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ 90 ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ:
ಕೇರಳದಲ್ಲಿ 2022-23ರ ಹಣಕಾಸು ವರ್ಷದಲ್ಲಿ 1,183 ಹೊಸ ಎಚ್‌ಐವಿ ಪ್ರಕರಣಗಳು ವರದಿಯಾಗಿದ್ದವು. 2023-24ರಲ್ಲಿ ಈ ಸಂಖ್ಯೆ 1,263ಕ್ಕೆ ಏರಿಕೆಯಾಗಿತ್ತು. 2024-25ರಲ್ಲಿ 1,213 ಪ್ರಕರಣಗಳು ದಾಖಲಾಗಿವೆ. 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ 819 ಹೊಸ ಸೋಂಕುಗಳು ವರದಿಯಾಗಿವೆ.
ಯುವಕರಲ್ಲಿ ಸೋಂಕಿಗೆ ಕಾರಣವಾಗುತ್ತಿರುವ ಅಂಶಗಳೇನು?
ಅಸುರಕ್ಷಿತ ಲೈಂಗಿಕ ಸಂಪರ್ಕ, ಮಾದಕವಸ್ತು ಬಳಕೆ ಹಾಗೂ ಸಿರಿಂಜ್‌ಗಳನ್ನು ಅಸುರಕ್ಷಿತವಾಗಿ ಬಳಸುವುದು ಎಚ್‌ಐವಿ ಸೋಂಕಿನ ಅಪಾಯವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ ಎಂದು ವರದಿ ಹೇಳಿದೆ. ಎಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ಸೂಜಿಗಳನ್ನು ಹಂಚಿಕೊಳ್ಳುವುದು, ಅಸುರಕ್ಷಿತ ರಕ್ತ ವರ್ಗಾವಣೆ ಮತ್ತು ತಾಯಿಯಿಂದ ಮಗುವಿಗೆ ಹರಡಬಹುದು. ಕೇರಳದಲ್ಲಿ ಎಚ್‌ಐವಿ ಸೋಂಕಿನ ಒಟ್ಟಾರೆ ಹರಡುವಿಕೆ ರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ರಾಷ್ಟ್ರೀಯ ವಯಸ್ಕ ಎಚ್‌ಐವಿ ಹರಡುವಿಕೆ ಶೇ.0.20ರಷ್ಟಿದ್ದರೆ, ಕೇರಳದಲ್ಲಿ ಅದು ಶೇ.0.07ರಷ್ಟಿದೆ ಎಂದು ವರದಿ ತಿಳಿಸಿದೆ.
ಆದರೆ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಅಂತರರಾಜ್ಯ ವಲಸೆ, ಜೊತೆಗೆ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕಾಗಿ ಯುವಕರು ಇತರ ರಾಜ್ಯಗಳು ಮತ್ತು ವಿದೇಶಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಹರಡುವಿಕೆಯ ಮೇಲೆ ಹೆಚ್ಚಿನ ನಿಗಾ ಅಗತ್ಯವಾಗಿದೆ ಎಂದು ವರದಿ ಸೂಚಿಸಿದೆ.



