August 8, 2026
Saturday, August 8, 2026
spot_img

ಕೇರಳಕ್ಕೆ ನಾಲ್ಕು ದಿನ ಮತ್ತೆ ಭಾರೀ ಮಳೆ ಎಚ್ಚರಿಕೆ: ಭೂಕುಸಿತ, ಪ್ರವಾಹ ಪ್ರದೇಶಗಳಲ್ಲಿ ಆಡಳಿತದ ಹದ್ದಿನಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೈಋತ್ಯ ಬಂಗಾಳ ಕೊಲ್ಲಿ ಹಾಗೂ ಉತ್ತರ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಆ.12ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಆ.9ರಂದು ಕೇರಳ–ಲಕ್ಷದ್ವೀಪ ಕರಾವಳಿಯಲ್ಲಿ ಭಾರೀ ಮಳೆಯ ಜೊತೆಗೆ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಕೇರಳದ ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ತಿರುವನಂತಪುರಂ, ಕೊಲ್ಲಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೂಡಾ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಆ.9ರಂದು ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಪ್ರವಾಹ, ಭೂಕುಸಿತದ ಸಾಧ್ಯತೆ: ಎಚ್ಚರ ವಹಿಸಲು ಸೂಚನೆ

ಭಾರೀ ಮಳೆಯಿಂದಾಗಿ ಭೂಕುಸಿತ, ಮಣ್ಣು ಕುಸಿತ ಮತ್ತು ಹಠಾತ್ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಲ್ಲಿ ವಾಸಿಸುವವರು ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ನದಿಗಳ ದಡ ಹಾಗೂ ಅಣೆಕಟ್ಟುಗಳ ಕೆಳಭಾಗದಲ್ಲಿ ವಾಸಿಸುವವರು ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ತಕ್ಷಣ ಸ್ಥಳಾಂತರಗೊಳ್ಳಲು ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ. ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ದುರ್ಬಲ ಅಥವಾ ಅಸುರಕ್ಷಿತ ಮನೆಗಳಲ್ಲಿ ವಾಸಿಸುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಭಾರೀ ಮಳೆಯ ಸಂದರ್ಭದಲ್ಲಿ ಅಗತ್ಯವಿಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಪಾಯಕಾರಿ ಜಲಮೂಲಗಳಲ್ಲಿ ಈಜುವುದು, ಮೀನುಗಾರಿಕೆಗೆ ತೆರಳುವುದು ಹಾಗೂ ನದಿ, ಹೊಳೆ ಅಥವಾ ಜಲಪಾತಗಳ ಬಳಿ ತೆರಳುವುದನ್ನು ತಪ್ಪಿಸಬೇಕು. ಸೇತುವೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಅಥವಾ ನೀರಿನ ಹರಿವು ವೀಕ್ಷಿಸಲು ಗುಂಪುಗೂಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:

ದಿನದ 24 ಗಂಟೆಯೂ ನಿಯಂತ್ರಣ ಕೊಠಡಿ ಅಲರ್ಟ್

ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕೇರಳದ ಎಲ್ಲಾ ಜಿಲ್ಲೆಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಸಿದ್ಧವಾಗಿಡಲಾಗಿದೆ. ತುರ್ತು ನೆರವಿಗಾಗಿ 1077 ಮತ್ತು 1070 ಟೋಲ್-ಫ್ರೀ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ವಿಪತ್ತು ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಲ್ಲಿರುವವರು ಅಗತ್ಯ ಔಷಧ, ದಾಖಲೆಗಳು, ಕುಡಿಯುವ ನೀರು, ಟಾರ್ಚ್ ಸೇರಿದಂತೆ ತುರ್ತು ಕಿಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !