ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಬ್ಯಾಟಿಂಗ್ ಮತ್ತು ಅಸಾಧಾರಣ ಆತ್ಮವಿಶ್ವಾಸದಿಂದ ಕ್ರೀಡಾ ಲೋಕದಲ್ಲಿ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೈದಾನದಲ್ಲಿ 28 ಅಥವಾ 30 ವರ್ಷಗಳ ಅನುಭವ ಹೊಂದಿರುವ ಅನುಭವಿ ಆಟಗಾರನಂತೆ ಕ್ರೀಸ್‌ನಲ್ಲಿ ಶಿಸ್ತಿನಿಂದ ಬ್ಯಾಟ್ ಬೀಸುವ ಈ ಯುವ ಆಟಗಾರ, ತಮ್ಮ ಅಸಾಧಾರಣ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಸೂರ್ಯವಂಶಿ ವಯಸ್ಸಿನ ಚರ್ಚೆಗೆ ಬ್ರೆಟ್ ಲೀ ತೆರೆ
ಸೂರ್ಯವಂಶಿ ಅವರ ವಯಸ್ಸಿನ ಕುರಿತು ಆರಂಭದಲ್ಲಿ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ವಿದೇಶಗಳಲ್ಲೂ ಈ ವಿಷಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಒಪ್ಪಿಕೊಂಡಿದ್ದಾರೆ. ರಣವೀರ್ ಅಲ್ಲಾಹಬಾಡಿಯಾ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಬ್ರೆಟ್, “ಆತನಿಗೆ 15, 16, 17 ಅಥವಾ 18 ವರ್ಷ ಇರಲಿ, ಅದು ಮುಖ್ಯವಲ್ಲ. ಆತ ಉನ್ನತ ಮಟ್ಟದ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದು ಅತ್ಯಂತ ಮುಖ್ಯ. 15 ವರ್ಷವಾಗಿದ್ದರೆ ಅದು ಅತ್ಯುತ್ತಮ, ಒಂದು ವೇಳೆ ಹೆಚ್ಚಿದ್ದರೂ ತೊಂದರೆಯಿಲ್ಲ. ಆತ ಉತ್ತಮವಾಗಿ ಆಡುತ್ತಿದ್ದು, ಭಾರತೀಯ ಕ್ರಿಕೆಟ್‌ಗೆ ಸಿಕ್ಕ ದೊಡ್ಡ ಆಸ್ತಿ” ಎಂದು ಮುಕ್ತವಾಗಿ ಹೊಗಳಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ
ತೀರಾ ಕಡಿಮೆ ಸಮಯದಲ್ಲಿ ಐಪಿಎಲ್‌ನಲ್ಲಿ ಮಿಂಚಿರುವ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 97 ರನ್‌ಗಳ ಬಿರುಗಾಳಿ ಇನ್ನಿಂಗ್ಸ್ ಆಡಿದ್ದರು. ಆಸೀಸ್ ವೇಗಿಗಳ ಭೀಕರ ಬೌನ್ಸರ್‌ಗಳನ್ನು ಸುಲಭವಾಗಿ ಹುಕ್ ಶಾಟ್‌ಗಳ ಮೂಲಕ ಸಿಕ್ಸರ್‌ಗೆ ಅಟ್ಟಿದ ಅವರ ಶೈಲಿ ಅಪಾರ ಮೆಚ್ಚುಗೆ ಗಳಿಸಿತು. ಪ್ರಸ್ತುತ ಈ ಯುವ ತಾರೆಯ ಮೇಲೆ ಯಾವುದೇ ಭಾರಿ ನಿರೀಕ್ಷೆಗಳ ಒತ್ತಡ ಹೇರದೆ, ಆತನನ್ನು ಸ್ವತಂತ್ರವಾಗಿ ಆಡಲು ಬಿಡಬೇಕು ಎಂದು ಬ್ರೆಟ್ ಲೀ ಸಲಹೆ ನೀಡಿದ್ದಾರೆ.

ಬೌನ್ಸರ್ ಸವಾಲು ಮತ್ತು ನೈಜ ಸ್ಪರ್ಧೆಯ ಕಲ್ಪನೆ
ಬ್ಯಾಟರ್‌ಗಳು ಹುಕ್ ಮತ್ತು ಪುಲ್ ಶಾಟ್‌ಗಳನ್ನು ಉತ್ತಮವಾಗಿ ಆಡಿದಾಗ ಅವರ ವಿರುದ್ಧ ಬೌಲಿಂಗ್ ಮಾಡುವುದು ತಮಗೆ ಇಷ್ಟ ಎಂದು ಬ್ರೆಟ್ ಲೀ ನೆನಪಿಸಿಕೊಂಡಿದ್ದಾರೆ. “ನಾನು ಆತನಿಗೆ ಬೌಲಿಂಗ್ ಮಾಡುತ್ತಿದ್ದರೆ ಖಂಡಿತಾ ದೇಹಕ್ಕೆ ತಗಲುವಂತೆ ಬೌನ್ಸರ್ ಎಸೆಯುತ್ತಿದ್ದೆ. ಆತ ಸಿಕ್ಸರ್ ಬಾರಿಸಿದರೂ, ಮತ್ತೆ ಬೌನ್ಸರ್ ಎಸೆದರು ಹಿಂಜರಿಯುತ್ತಿರಲಿಲ್ಲ” ಎಂದು ಸೂರ್ಯವಂಶಿ ಅವರ ಹುಕ್ ಶಾಟ್ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.



