August 9, 2026
Sunday, August 9, 2026
spot_img

ಬಲವಂತದ ರಾಜೀನಾಮೆ ಆರೋಪ: ಸಭಾಪತಿ ಹೊರಟ್ಟಿ ರಾಜೀನಾಮೆ ಅಂಗೀಕರಿಸದಂತೆ ರಾಜ್ಯಪಾಲರಿಗೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು, ಈ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ರಾಜ್ಯಪಾಲರಿಗೆ ಸುದೀರ್ಘ ಮನವಿ ಸಲ್ಲಿಸಿದ್ದಾರೆ.

ರಾಜಭವನಕ್ಕೆ ಮೈತ್ರಿಕೂಟ ನಿಯೋಗ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶರವಣ ಅವರ ಜಂಟಿ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ನಿಯೋಗವು ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಯಿತು. ಸಭಾಪತಿಗಳ ರಾಜೀನಾಮೆ ಪ್ರಕ್ರಿಯೆಯು ಸದನದ ನಿಯಮಾವಳಿ ಮತ್ತು ನಡಾವಳಿಗಳಿಗೆ ಅನುಗುಣವಾಗಿ ನಡೆದಿಲ್ಲ. ಆದ್ದರಿಂದ ಈ ರಾಜೀನಾಮೆ ಪತ್ರವನ್ನು ಅಂಗೀಕರಿಸದೆ ತಿರಸ್ಕರಿಸಬೇಕು ಎಂದು ನಿಯೋಗವು ಲಿಖಿತ ದೂರು ನೀಡಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ನಲ್ಲಿ ಸಭಾಧ್ಯಕ್ಷ ಹಾಗೂ ಸಭಾಪತಿಗಳ ಹೆಸರುಗಳ ಆಯ್ಕೆ ಪ್ರಕ್ರಿಯೆ ನಡೆಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಒತ್ತಡ ಹೇರಿ ರಾಜೀನಾಮೆ ಪಡೆದ ಆರೋಪ

ಆಗಸ್ಟ್ 7 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದ ಕಾಂಗ್ರೆಸ್ ನಾಯಕರ ತಂಡವು ಸಭಾಪತಿಗಳ ಕೊಠಡಿಗೆ ಆಗಮಿಸಿ, ತಕ್ಷಣವೇ ರಾಜೀನಾಮೆ ನೀಡುವಂತೆ ತೀವ್ರ ಒತ್ತಡ ಹೇರಿತು ಎಂದು ಬಸವರಾಜ ಹೊರಟ್ಟಿ ಅವರೇ ರಾಜ್ಯಪಾಲರಿಗೆ ಪತ್ರ ಬರೆದು ಸಮಗ್ರ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !