August 30, 2026
Sunday, August 30, 2026
spot_img

ಬಿ.ನಾಗೇಂದ್ರಗೆ ED ಶಾಕ್: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ ಮಾಡಿದರೇ ಸಚಿವರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರು ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರವಾಸದ ದೃಢೀಕರಣಕ್ಕಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.

ಕೋರ್ಟ್ ಆದೇಶ ಹಾಗೂ ಪ್ರವಾಸದ ವಿವರಗಳು

2024ರ ಅಕ್ಟೋಬರ್ 14ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ರಾಜ್ಯದಿಂದ ಹೊರಗೆ ಪ್ರಯಾಣಿಸುವುದಿದ್ದಲ್ಲಿ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಕೋರ್ಟ್‌ ಈ ಹಿಂದೆ ಏಪ್ರಿಲ್ 26 ರಿಂದ ಜೂನ್ 2, ಜೂನ್ 11 ರಿಂದ ಜುಲೈ 7 ಹಾಗೂ ಜುಲೈ 16 ರಿಂದ ಜುಲೈ 25 ರವರೆಗೆ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಆದರೆ, ಅನುಮತಿ ಇಲ್ಲದ ಜುಲೈ 15 ಹಾಗೂ ಜುಲೈ 26 ರಂದು ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಜುಲೈ 17 ರಂದು ಅನುಮತಿ ಇದ್ದ ದಿನದಂದು ಎಐಸಿಸಿ ಕಚೇರಿಯಲ್ಲಿ ಅವರು ಶಾಸಕರೊಂದಿಗೆ ಕಂಡುಬಂದಿದ್ದರು.

ಇಡಿ ಪರಿಶೀಲನೆ ಹಾಗೂ ಸಾಕ್ಷ್ಯ ಸಂಗ್ರಹ

ಪ್ರಸ್ತುತ ಇಡಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು, ಶಿಷ್ಟಾಚಾರ ವಿಭಾಗದ ರಿಜಿಸ್ಟರ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ದಾಖಲೆಗಳನ್ನು ಜಾಲಾಡುತ್ತಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಸಾಬೀತಾದರೆ ಜಾಮೀನು ರದ್ದುಗೊಳಿಸಲು ನ್ಯಾಯಾಲಯದ ಮೊರೆ ಹೋಗಲು ಇಡಿ ಸಿದ್ಧತೆ ನಡೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !