August 9, 2026
Sunday, August 9, 2026
spot_img

ಖಾಸಗಿ ಸಂಸ್ಥೆಯ ತರಬೇತಿ ವಿಮಾನ ಪತನ: ಪೈಲೆಟ್ ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಪಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು (ಭಾನುವಾರ) ಮಧ್ಯಾಹ್ನ ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುವಾಗ ರನ್‌ವೇಯಿಂದ ಜಾರಿ ಅಪಘಾತಕ್ಕೀಡಾಗಿದೆ. ಸುಮಾರು ಏಳು ತಿಂಗಳ ಹಿಂದೆ ಮಹಾರಾಷ್ಟ್ರದ ಅಂದಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇದೇ ನಗರದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕಹಿ ನೆನಪಿನ ನಡುವೆಯೇ ಈ ಘಟನೆ ಸಂಭವಿಸಿದೆ.

ಮಧ್ಯಾಹ್ನ ಸುಮಾರು 12:35 ರ ವೇಳೆಗೆ ವಿಮಾನ ನಿಲ್ದಾಣದ ಆವರಣದೊಳಗೆ, ರನ್‌ವೇಯಿಂದ ಸ್ವಲ್ಪವೇ ದೂರದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ತಪ್ಪಿದ ಭಾರೀ ದುರಂತ

ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಗಿಲ್, ತರಬೇತಿ ಹಾರಾಟದ ಸಮಯದಲ್ಲಿ ಬಾರಾಮತಿ ವಿಮಾನ ನಿಲ್ದಾಣದಲ್ಲಿ VT-SEX ನೋಂದಣಿ ಸಂಖ್ಯೆಯ ವಿಮಾನವು ರನ್‌ವೇಯಿಂದ ಪಕ್ಕಕ್ಕೆ ಜಾರಿದ ಘಟನೆ ನಡೆದಿದೆ. ಈ ವೇಳೆ ವಿಮಾನದಲ್ಲಿ ಕ್ಯಾಪ್ಟನ್ ಚಿರಾಗ್ ಶಶಿಕಾಂತ್ ದೊಯ್ಫೋಡೆ ಮತ್ತು ಕ್ಯಾಡೆಟ್ ಅಭಿಜೀತ್ ಜುಂಗ್ರೆ ಇದ್ದರು. ಇಬ್ಬರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಜಿತ್ ಪವಾರ್ ದುರಂತದ ಕಹಿ ಹಿನ್ನೆಲೆ

ಕಳೆದ ಜನವರಿ 28 ರಂದು ಬಾರಾಮತಿ ವಿಮಾನ ನಿಲ್ದಾಣದ ಬಳಿ ವಿಎಸ್‌ಆರ್ ವೆಂಚರ್ಸ್ ಸಂಸ್ಥೆಗೆ ಸೇರಿದ ಲಿಯರ್‌ಜೆಟ್ 45 ವಿಮಾನ ಪತನಗೊಂಡು 66 ವರ್ಷದ ಎನ್‌ಸಿಪಿ ನಾಯಕ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಸಹಾಯಕ ಹಾಗೂ ಇಬ್ಬರು ಪೈಲಟ್‌ಗಳಾದ ಕಮಾಂಡರ್ ಸುಮಿತ್ ಕಪೂರ್ ಮತ್ತು ಫಸ್ಟ್ ಆಫೀಸರ್ ಶಾಂಭವಿ ಪಾಠಕ್ ಸೇರಿದಂತೆ ಐವರು ಸಾವನ್ನಪ್ಪಿದ್ದರು.

ವಿಮಾನ ಅಪಘಾತ ತನಿಖಾ ಸಂಸ್ಥೆಯಾದ AAIB ತನ್ನ ಪ್ರಾಥಮಿಕ ವರದಿಯಲ್ಲಿ, ಅಪಘಾತದ ಸಮಯದಲ್ಲಿ ಹಾರಾಟಕ್ಕೆ ಅಗತ್ಯವಿರುವಷ್ಟು ಸ್ಪಷ್ಟ ನೋಟ ಇರಲಿಲ್ಲ ಹಾಗೂ ಬಾರಾಮತಿಯ ರನ್‌ವೇ ಮೇಲಿನ ಮಸುಕಾಗಿದ್ದ ಗುರುತುಗಳು ಮತ್ತು ರನ್‌ವೇ ಮೇಲಿದ್ದ ಸಡಿಲವಾದ ಜಲ್ಲಿಕಲ್ಲುಗಳು ದುರಂತಕ್ಕೆ ಕಾರಣ ಎಂದು ಎತ್ತಿ ತೋರಿಸಿತ್ತು. ಮುಂದಿನ ವರ್ಷದ ಜನವರಿ ವೇಳೆಗೆ ಇದರ ಅಂತಿಮ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಸರಣಿ ಅಪಘಾತಗಳ ತಾಣವಾದ ಬಾರಾಮತಿ

ಕಳೆದ ಮೇ 13 ರಂದೂ ಸಹ ಬಾರಾಮತಿ ಏರ್‌ಸ್ಟ್ರಿಪ್ ಪಕ್ಕದ ಗೋಜುಬಾವಿ ಗ್ರಾಮದ ಬಳಿ ಖಾಸಗಿ ಸಂಸ್ಥೆಯೊಂದರ ಮತ್ತೊಂದು ತರಬೇತಿ ವಿಮಾನ ಪತನಗೊಂಡಿತ್ತು. ಆ ವೇಳೆ ವಿಮಾನವು ಕಡಿಮೆ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿತ್ತು. ಅದೃಷ್ಟವಶಾತ್ ಆ ಬಾರಿಯೂ ತರಬೇತಿ ನಿರತ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !