August 9, 2026
Sunday, August 9, 2026
spot_img

ಬಂಗಾಳದಲ್ಲಿ ಹೈಡ್ರಾಮಾ: ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಇಟ್ಟಿಗೆ-ಕಲ್ಲುಗಳಿಂದ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಂದು ರಾಜಕೀಯ ಹೈಡ್ರಾಮಾವೊಂದು ನಡೆದಿದೆ. ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಮತ್ತು ಇಟ್ಟಿಗೆಗಳಿಂದ ಭೀಕರ ದಾಳಿ ನಡೆಸಿದ್ದಾರೆ. ʼಈ ದಾಳಿಯು ನನ್ನ ಜೀವವನ್ನೇ ಬಲಿ ತೆಗೆದುಕೊಳ್ಳಬಹುದಿತ್ತುʼ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ, ಹಿಂಸಾಚಾರದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿದೆ.

ಮಣ್ಣು, ಶೂ ಮತ್ತು ನೀರಿನ ಬಾಟಲಿ ಎಸೆತ

ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಟಿಎಂಸಿ ಪಕ್ಷದ ಕಾರ್ಯಕರ್ತನ ಮನೆಗೆ ಭೇಟಿ ನೀಡಲು ಮಮತಾ ಬ್ಯಾನರ್ಜಿ ಅವರು ಹಾಲಿಸಹರ್ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಅಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಮಮತಾ ಬ್ಯಾನರ್ಜಿ ಅವರ ಕಾರನ್ನು ಸುತ್ತುವರೆದರು. ಕಾರಿಗೆ ಮಣ್ಣು ಬಳಿದ ಪ್ರತಿಭಟನಾಕಾರರು, ಅದರ ಮೇಲೆ ಶೂ ಹಾಗೂ ನೀರಿನ ಬಾಟಲಿಗಳನ್ನು ಎಸೆದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸುತ್ತಿರುವಾಗಲೇ “ಚೋರ್ ಭಗಾವೋ” ಎಂಬ ಘೋಷಣೆಗಳು ಕೇಳಿಬಂದವು.

ʼನನ್ನ ತಲೆ ಸೀಳಿ ಹೋಗುತ್ತಿತ್ತು!ʼ – ಮಮತಾ ಆತಂಕ

ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ʼಪೊಲೀಸರ ಮುಂದೆಯೇ ಹೊರಗಿನಿಂದ ಬಂದ ಸಮಾಜವಿರೋಧಿಗಳು ನನ್ನ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ನನ್ನ ಕಾರಿನ ಕಿಟಕಿ ಗಾಜುಗಳು ಮುಚ್ಚದೇ ಇದ್ದಿದ್ದರೆ, ಕಲ್ಲುಗಳು ನೇರವಾಗಿ ಬಂದು ನನ್ನ ತಲೆಯನ್ನು ಸೀಳುತ್ತಿದ್ದವು. ನಾನು ಸಾಯಬಹುದಿತ್ತು. ನನ್ನ ಜೀವನದಲ್ಲಿ ಎಂದಿಗೂ ಇಂತಹ ದಾಳಿಯನ್ನು ಎದುರಿಸಿಲ್ಲ. ಪೊಲೀಸರು ನಮ್ಮನ್ನು ರಕ್ಷಿಸಲು ಏನೂ ಮಾಡಲಿಲ್ಲ, ಅವರು ಕೇವಲ ಬಿಜೆಪಿಗೆ ಮಾತ್ರ ರಕ್ಷಣೆ ನೀಡುತ್ತಾರೆʼ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಮತಾ ಬ್ಯಾನರ್ಜಿ ಅವರೊಂದಿಗೆ ಇದ್ದ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದೆ ಡೋಲಾ ಸೇನ್ ಕೂಡ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೊಲೀಸರನ್ನು ಬಳಸಿಕೊಂಡು ರಾಜ್ಯಭಾರ ನಡೆಸುತ್ತಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಬಿಜೆಪಿ

ಪಕ್ಷದ ಕಾರ್ಯಕರ್ತರಿಂದ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಯಾವಾಗಲೂ ಪ್ರತಿಪಾದಿಸುವ ರಾಜ್ಯ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರು ಮಾಜಿ ಮುಖ್ಯಮಂತ್ರಿಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಲಾಕಪ್ ಡೆತ್ ಹಿನ್ನೆಲೆ

ಮಾಜಿ ಟಿಎಂಸಿ ಕೌನ್ಸಿಲರ್ ಅವರ ಪತಿ ಬಿರ್ಜು ಕೆವೊಟ್ ಎಂಬುವವರು ಕಳೆದ ಶುಕ್ರವಾರ ಸುಲಿಗೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಆದರೆ ಅವರು ಪೊಲೀಸ್ ಲಾಕಪ್‌ನಲ್ಲಿ ತೀವ್ರ ಹಿಂಸೆಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಜೆನ್ನಿ ಶರ್ಮಾ ಆರೋಪಿಸಿದ್ದರು. ಅವರ ಕುಟುಂಬವನ್ನು ಭೇಟಿ ಮಾಡಲು ಮಮತಾ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ ಈ ಘಟನೆಯನ್ನು ಖಂಡಿಸಿದ್ದು, ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಪೊಲೀಸರು ಕೆವೊಟ್ ಅವರನ್ನು ಕರೆದೊಯ್ದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಲಾಕಪ್ ಡೆತ್ ಆರೋಪಗಳಿಗೆ ಪೊಲೀಸರು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !