ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೂಲ ನೆಲೆಗಳು ಇಂದು ನದಿ ತಿರುವು ಯೋಜನೆ, ಪರಿಸರ ಹಾನಿ ಮುಂತಾದ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಇದೇ ಅ.10 ರಂದು ಈ ಕುರಿತಾಗಿ ಬೃಹತ್ ಪ್ರತಿಭಟನೆ ನಡೆಯಲಿದೆ, ಇದರಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಡಾ. ಗಿರಿಧರ ಕಜೆ ಕರೆನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಅಖಿಲ ಹವ್ಯಕ ಮಹಾಸಭೆಯ 83ನೆಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.
ಮಹಿಳೆಯರು ಸಕ್ರಿಯರಾದಾಗ ಮಾತ್ರ ಸಮಗ್ರ ಸಮಾಜದ ಜಾಗೃತಿ ಸಾಧ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಯನ್ನು ಬಲಗೊಳಿಸಲಾಗುತ್ತಿದ್ದು, ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿರುವ 83 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಡಿ.20 ರಂದು ಬೃಹತ್ ಹವ್ಯಕ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಮುಂದಿನ ವರ್ಷ ಯುವಕರ ಸಂಘಟನೆಗೆ ಯೋಜಿಸಲಾಗಿದ್ದು, ದೇಶ – ಹೊರದೇಶಗಳ 84 ಪ್ರಾಂತ್ಯಗಳಲ್ಲಿ ಹವ್ಯಕ ಯುವ ವೇದಿಕೆ ಕಾರ್ಯಾರಂಭ ಮಾಡಲಿದೆ. ಮಹಿಳೆಯರು ಹಾಗೂ ಯುವಕರು ಸಂಘಟಿತರಾದಾಗ ಬಲಿಷ್ಠ ಸಂಘಟನೆ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ವೈವಾಹಿಕ ಸಮಸ್ಯೆಗಳು ಸೇರಿದಂತೆ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಘಟನೆಯೇ ಪರಿಹಾರವಾಗಿದ್ದು, ಸಂಘಟನೆ ಬಲಿಷ್ಠವಾದಾಗ ಸಮಾಜ ಸುಭಿಕ್ಷೆಯಿಂದ ಇರಲು ಸಾಧ್ಯ ಎಂದ ಅವರು ಸಂಘ ಸಂಸ್ಥೆಗಳು ಸಕ್ರಿಯವಾಗಿದ್ದಾಗ ಸಮಾಜದಿಂದ ಸಹಜವಾಗಿಯೇ ಬೆಂಬಲ ವ್ಯಕ್ತವಾಗುತ್ತದೆ. ಕಾರ್ಯಕ್ರಮಗಳು ಹೆಚ್ಚಾಗಿ ನಡೆದಾಗ ಸಮಾಜವು ನಮ್ಮನ್ನು ಗುರುತಿಸುತ್ತದೆ ಹಾಗೂ ನಾವು ಹೆಚ್ಚು ಜನರನ್ನು ತಲುಪಲು ಸಾಧ್ಯ. ಹವ್ಯಕ ಮಹಾಸಭೆಯು ಈ ದಿಶೆಯಲ್ಲಿ ಪ್ರಾದೇಶಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜಾತಿಯನ್ನೂ ಮೀರಿ ಸಮಷ್ಟಿ ಸಮಾಜಕ್ಕೆ ಉಪಕಾರಿಯಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು – ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.



