ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪಡ್ಡಂ ಪ್ರದೇಶದ ಕೃಷಿ ಜಮೀನಿನಲ್ಲಿ ಅಪರೂಪದ ನೀರುನಾಯಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಸ್ಥಳೀಯ ನಿವಾಸಿ ಕೃಷಿಕರೋರ್ವರು ತಮ್ಮ ಭತ್ತದ ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಅಪರೂಪದ ಪ್ರಾಣಿಯೊಂದನ್ನು ಕಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಅದು ನೀರುನಾಯಿ ಎಂದು ಖಚಿತಗೊಂಡಿದೆ. ಸಾಮಾನ್ಯವಾಗಿ ನದಿ, ಕೆರೆ, ತೊರೆ ಸೇರಿದಂತೆ ನೀರಿನ ಮೂಲಗಳ ಸುತ್ತಮುತ್ತ ಕಾಣಿಸಿಕೊಳ್ಳುವ ನೀರುನಾಯಿ, ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿರುವುದು ಈಗ ಅಚ್ಚರಿ ಮೂಡಿಸಿದೆ. ವಿಶೇಷವೆಂದರೆ, ಗದ್ದೆಯಲ್ಲಿ ಕಾಣಿಸಿಕೊಂಡ ನೀರುನಾಯಿ ತಕ್ಷಣ ಅಲ್ಲಿಂದ ತೆರಳದೆ, ಅದೇ ಪ್ರದೇಶದಲ್ಲಿ ಎರಡು ದಿನಗಳಿಂದ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ. ಈ ಬೆಳವಣಿಗೆ ಇನ್ನಷು ಕುತೂಹಲಕ್ಕೆ ಕಾರಣವಾಗಿದೆ. ನೀರುನಾಯಿಗಳು ಸಾಮಾನ್ಯವಾಗಿ ನೀರಿನ ಮೂಲಗಳಿಗೆ ಸಮೀಪದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಪಡ್ಡಂನ ಕೃಷಿ ಜಮೀನಿನ ಭತ್ತದ ಗದ್ದೆಯಲ್ಲಿ ಅದು ಬಿಡಾರ ಹೂಡಿದ್ದು ಅಚ್ಚರಿ ಮೂಡಿಸಿದೆ.
ಏನಿದು ನೀರುನಾಯಿ?
ನೀರುನಾಯಿ (Otter) ನೆಲ ಮತ್ತು ನೀರು ಎರಡರಲ್ಲೂ ಬದುಕುವ ಅರೆ-ಜಲಚರ ಸಸ್ತನಿ. ಉದ್ದನೆಯ ದೇಹ, ಚಿಕ್ಕ ಕಿವಿಗಳು, ದಟ್ಟವಾದ ತುಪ್ಪಳ ಮತ್ತು ಈಜಲು ಸಹಾಯ ಮಾಡುವ ಬಾಲ ಹಾಗೂ ಜಾಲಿಬೆರಳುಗಳು ಇದರ ಪ್ರಮುಖ ಲಕ್ಷಣಗಳು. ಮೀನು ಸೇರಿದಂತೆ ವಿವಿಧ ಜಲಚರಗಳನ್ನು ಆಹಾರವಾಗಿ ಸೇವಿಸುತ್ತದೆ. ನದಿ, ಕೆರೆ, ತೊರೆ, ಜಲಾಶಯ, ಜೌಗು ಪ್ರದೇಶಗಳಂತಹ ನೀರಿನ ಮೂಲಗಳ ಸುತ್ತ ಸಾಮಾನ್ಯವಾಗಿ ಕಂಡುಬರುತ್ತದೆ.
ಭಾರತದಲ್ಲಿ ಎಷ್ಟು ಪ್ರಭೇದಗಳಿವೆ?
ಭಾರತದಲ್ಲಿ ಮುಖ್ಯವಾಗಿ ಸ್ಮೂತ್-ಕೋಟೆಡ್ ನೀರುನಾಯಿ, ಯುರೇಷಿಯನ್ ನೀರುನಾಯಿ, ಏಷ್ಯನ್ ಸ್ಮಾಲ್-ಕ್ಲಾಡ್ ನೀರುನಾಯಿ ಎಂಬ ಮೂರು ಪ್ರಭೇದಗಳ ನೀರುನಾಯಿಗಳು ಕಂಡುಬರುತ್ತವೆ: ಕರ್ನಾಟಕ, ಕೇರಳ ಮತ್ತು ಗೋವಾ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಯುರೇಷಿಯನ್ ನೀರುನಾಯಿ ಮತ್ತು ಸ್ಮೂತ್-ಕೋಟೆಡ್ ನೀರುನಾಯಿ ಕಂಡುಬರುತ್ತವೆ. ಸ್ಮೂತ್-ಕೋಟೆಡ್ ನೀರುನಾಯಿ ದೊಡ್ಡ ನದಿಗಳು, ಕೆರೆಗಳು, ಜಲಾಶಯಗಳು, ಕರಾವಳಿ ಪ್ರದೇಶಗಳು ಮತ್ತು ಕೆಲವು ಸಂದರ್ಭಗಳಲ್ಲಿ ಭತ್ತದ ಗದ್ದೆಗಳಲ್ಲಿಯೂ ಆಹಾರ ಹುಡುಕಲು ಪ್ರವೇಶಿಸಬಹುದು. ಹೀಗಾಗಿ ಹಿರಿಯಡ್ಕದ ಪಡ್ಡಂ ಭತ್ತದ ಗದ್ದೆಯಲ್ಲಿ ನೀರುನಾಯಿ ಕಾಣಿಸಿಕೊಂಡಿರುವುದು ಬೆಚ್ಚಿಬೀಳಿಸುವ ಘಟನೆ ಅಲ್ಲ. ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಿಸಿದ್ದಾರೆ. ಜೊತೆಗೆ ನೀರುನಾಯಿಗಳು ಸಾಮಾನ್ಯವಾಗಿ ಸಾಕಷ್ಟು ಆಹಾರ ಮತ್ತು ಸ್ವಚ್ಛ ನೀರು ಇರುವ ಸ್ಥಳಗಳನ್ನು ಆರಿಸಿಕೊಳ್ಳುತ್ತವೆ ಹೀಗಾಗಿ ಅವುಗಳನ್ನು ಜಲಮೂಲದ ಪರಿಸರ ಆರೋಗ್ಯದ ಸೂಚಕ ಜೀವಿ ಎಂದೂ ಪರಿಗಣಿಸಲಾಗುತ್ತದೆ.



