August 9, 2026
Sunday, August 9, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ । ಊಟ ಮಾಡದೇ ಇರುವುದು ಉಪವಾಸವಲ್ಲ, ಹಸಿವು ಅರಿವಾಗದ ಸ್ಥಿತಿ ಉಪವಾಸ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಸಿವನ್ನು ಕಟ್ಟಿಹಾಕುವುದು ಉಪವಾಸವಲ್ಲ. ಹಸಿವು ಅರಿವಾಗದ ಸ್ಥಿತಿ ನಿಜವಾದ ಉಪವಾಸ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಬಾನುವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ “ಉಪವಾಸ” ದ ಕುರಿತಾಗಿ ಅವರು ಪ್ರವಚನ ಅನುಗ್ರಹಿಸಿದರು.

ಹಸಿವನ್ನು ಕಟ್ಟುವುದು ದೇಹದ ವೇಗವನ್ನು ಕಟ್ಟುವ ಪ್ರಕ್ರಿಯೆಯಾಗಿದ್ದು, ಸಹಜ ಕ್ರಿಯೆಯನ್ನು ತಡೆಯುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೊಟ್ಟೆ ಕೆಲಸ ಮಾಡುವಾಗ ಹೃದಯ ಕೆಲಸ ಮಾಡುವುದಿಲ್ಲ. ಹೊಟ್ಟೆ ಕೆಲಸವನ್ನು ನಿಲ್ಲಿಸಿದಾಗ ಹೃದಯದ ಭಾವನೆ ಜಾಗೃತವಾಗುತ್ತದೆ. ನಿರಾಹಾರವು ನಿಜವಾದ ಉಪವಾಸವಾಗಬೇಕಾದರೆ ಭಾವನೆ ಅತ್ಯಗತ್ಯ. ಊಟ ಮಾಡಿದರೆ ಮಾತ್ರ ಉಪವಾಸ ವ್ರತದ ಭಂಗವಲ್ಲ, ಹಸಿವಾದರೂ ಉಪವಾಸದ ವ್ರತ ಭಂಗವಾಗುತ್ತದೆ ಎಂದು ಶ್ರೀಗಳು ಹೇಳಿದರು.

ವಾಲ್ಮೀಕಿ ಮಹರ್ಷಿಗಳ ಪ್ರಕರಣವನ್ನು ಉಲ್ಲೇಖಿಸಿದ ಶ್ರೀಗಳು, ವಾಲ್ಮೀಕಿಗಳು ತಪಸ್ಸನ್ನಾಚರಿಸುತ್ತಿರುವಾಗ ಅವರ ಮೇಲೆ ಹುತ್ತವೇ ಬೆಳೆಯಿತು. ಅಂದರೆ ಅವರು ವರ್ಷಗಳ ಕಾಲ ಅಲುಗಾಡದೇ ಕುಳಿತಿದ್ದರು. ಅಷ್ಟು ಸಮಯ ಅವರು ಊಟಾದಿಗಳನ್ನೂ ಮಾಡಿರಲಿಲ್ಲ‌. ಆ ಸಮಯದಲ್ಲಿ ಅವರಿಗೆ ಊಟ ನೆನಪಾಗಲಿಲ್ಲ ಹಾಗೂ ರಾಮ ಮನಸ್ಸಿನಿಂದ ಮರೆಯಾಗಲಿಲ್ಲ. ಹಾಗಾಗಿ ಅವರು ಸಹಜವಾಗಿ ಉಪವಾಸದಲ್ಲಿ ಇದ್ದರು ಎಂದು ಉದಾಹರಿಸಿ, ಅಚಲವಾದ ಭಾವವಿದ್ದಾಗ ನಿಜವಾದ ಉಪವಾಸ ಸಾಧ್ಯ ಎಂದು ನಿರೂಪಿಸಿದರು.

ಯೋಗತಾರಾವಳಿಯ ಶ್ಲೋಕವನ್ನು ಉದಾಹರಿಸಿ, ಇಲ್ಲಿ ಶಂಕರಾಚಾರ್ಯರು ದೇಹದ ಮೇಲೆ ಬಳ್ಳಿ ಬೆಳೆಯುವಷ್ಟು, ಕಿವಿಯಲ್ಲಿ ಹಕ್ಕಿಗಳು ಗೂಡುಕಟ್ಟುವಷ್ಟು ಕಾಲ ಸಮಾಧಿ ಸ್ಥಿತಿಯಲ್ಲಿ ಕೂರಬೇಕು ಎಂದು ಆಶಿಸಿದ್ದಾರೆ. ಸಮಾಧಿ ಸ್ಥಿತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಸಮಾಧಿ ಸ್ಥಿತಿಯಲ್ಲಿ ಮನಸ್ಸು ಎಂಬುದು ಪ್ರತ್ಯೇಕವಾಗಿ ಉಳಿದಿರುವುದೇ ಇಲ್ಲ. ಹಾಗಾದ ಸ್ಥಿತಿ ಉಂಟಾದರೆ ನಿಜವಾದ ಉಪವಾಸ ಸಹಜವಾಗಿ ಏರ್ಪಡುತ್ತದೆ. ಇಂತಹ ಉದಾಹರಣೆಗಳನ್ನು ವಿಶ್ವಾಮಿತ್ರರು, ಹಿರಣ್ಯಕಶಿಪು ಹಾಗೂ ರಮಣ ಮಹರ್ಷಿಗಳ ಚರಿತ್ರೆಯಲ್ಲೂ ಕಾಣಬಹುದು ಎಂದು ವಿವರಿಸಿದರು.

ತಮ್ಮದೇ ಉದಾಹರಣೆ ನೀಡಿದ ಶ್ರೀಗಳು, ತಾವು ಸಂನ್ಯಾಸ ಸ್ವೀಕಾರಕ್ಕೂ ಪೂರ್ವದಲ್ಲಿ ಮಹಾಭಾರತವನ್ನು ಅಧ್ಯಯನ ಮಾಡುವ ಸಮಯದಲ್ಲಿ ನಮಗೆ ಆಹಾರ ನಿದ್ದೆಗಳ ಪರಿವೇ ಇರುತ್ತಿರಲಿಲ್ಲ. ನಾವು ಅದರಲ್ಲೇ ಮಗ್ನರಾಗಿರುತ್ತಿದ್ದೆವು‌. ನಮಗೆ ಆಹಾರದ ನೆನಪಾಯಿತು ಎಂದರೆ ನಾವು ಸಂಪೂರ್ಣವಾಗಿ ಮೈಮರೆತಿಲ್ಲ ಎಂದರ್ಥ. ಉಪವಾಸವನ್ನು ಯಾರೋ ಮಹಾತ್ಮರು ಮಾತ್ರ ಆಚರಿಸುವುದಲ್ಲ. ಸಾಮಾನ್ಯ ಜನರೂ ಕೂಡ ಆಚರಿಸಬಹುದು ಎಂದು ಅಭಿಪ್ರಾಯಪಟ್ಟರು.

ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಪ್ರವೀಣ ಭೀಮನಕೊಣೆ, ಶ್ರೀನಾಥ ಸಾರಂಗ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನರಾದ ಲಕ್ಷ್ಮೀನಾರಾಯಣ ಹೆಗಡೆ ಸಾಣ್ಮನೆ ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !