ಹೊಸದಿಗಂತ ವರದಿ ಮಂಗಳೂರು:
ಕರಾವಳಿಯನ್ನೇ ಬೆಚ್ಚಿಬೀಳಿದ್ದ ಉಡುಪಿ ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಉದ್ಯಮಿ ಡೇವಿಡ್ ಡಿಸೋಜಾ ಗುಂಡಿಟ್ಟು ಕೊಲೆ ಪ್ರಕರಣದ ಇಬ್ಬರು ಆರೋಪಿಗಳಾದ ಉತ್ತರಾಖಂಡದ ಅಜಯ್ ಅಲಿಯಾಸ್ ಅನ್ಮೋಲ್ ರಸ್ತೋಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ನನ್ನು ನ್ಯಾಯಾಲಯ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕೃತ್ಯ ನಡೆಸಿದ 24 ತಾಸುಗಳ ಒಳಗಾಗಿ ಪೊಲೀಸ್ ಬಲೆಗೆ ಬಿದ್ದಿದ್ದ ಇವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಕಾಪು ಪೊಲೀಸ್ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಧೀಶರನ್ನು ಕೋರಿದ್ದರು. ಮನವಿಗೆ ಸಮ್ಮತಿಸಿದ ನ್ಯಾಯಾಧೀಶರು ಇಬ್ಬರನ್ನೂ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಇದನ್ನೂ ಓದಿ:
ಡೇವಿಡ್ ಕೊಲೆ ಹಿಂದೆ ಹಣಕಾಸಿನ ವ್ಯಷಮ್ಯ ಸಹಿತ ಹಲವು ಅಂಶಗಳ ಕುರಿತಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಜೊತೆಗೆ ಹಂತಕರು ಸುಪಾರಿ ಕಿಲ್ಲಸ್೯ ಎಂಬುದೂ ತನಿಖೆಯಲ್ಲಿ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಸೂತ್ರಧಾರಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ನೆರೆ ರಾಜ್ಯಗಳಿಗೂ ತಂಡಗಳನ್ನು ರವಾನಿಸಿದ್ದು, ಶೀಘ್ರವೇ ಕೃತ್ಯದ ಹಿಂದಿನ ನಿಗೂಢತೆ ಬೇಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



