ಹೊಸದಿಗಂತ ವರದಿ ಬೆಳಗಾವಿ:
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ಸಾಹಸ, ದೇಶಪ್ರೇಮ ಹಾಗೂ ಹೋರಾಟದ ಇತಿಹಾಸವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ವೀರಭೂಮಿ ಮತ್ತು ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ತಿಳಿಸಿದರು.
ರಾಯಣ್ಣನ ಇತಿಹಾಸ ಅನಾವರಣ
ಮಂಗಳವಾರ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಮ್ಯೂಸಿಯಂ ಸಾರ್ವಜನಿಕ ಪ್ರವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅವರ ಜೀವನ ಮತ್ತು ಹೋರಾಟದ ಕುರಿತು ಯುವಜನತೆ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಅವರು ಮಾಡಿದ ತ್ಯಾಗ ಮತ್ತು ಬಲಿದಾನ ಎಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಅವರು ಕಿತ್ತೂರು ಸಂಸ್ಥಾನದ ರಕ್ಷಣೆಗೆ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಹಿಸಿದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಯಣ್ಣನ ಧೈರ್ಯ, ದೇಶಾಭಿಮಾನ ಹಾಗೂ ನಾಡಿನ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಿದೆ ಎಂದು ಎಚ್.ಎಂ. ರೇವಣ್ಣ ತಿಳಿಸಿದರು.
ನಾಡಿನ ಇತಿಹಾಸ ತಿಳಿಸುವ ಜ್ಞಾನಕೇಂದ್ರ
ವೀರಭೂಮಿ ಮತ್ತು ವಸ್ತು ಸಂಗ್ರಹಾಲಯದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಜೀವನ, ಹೋರಾಟ, ಕಿತ್ತೂರು ಇತಿಹಾಸ ಹಾಗೂ ಅಂದಿನ ಕಾಲಘಟ್ಟಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳು ಮತ್ತು ವಸ್ತುಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ವ್ಯವಸ್ಥೆ ಮಾಡಲಾಗಿದೆ. ಇತಿಹಾಸಾಸಕ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಸ್ತು ಸಂಗ್ರಹಾಲಯವು ಕೇವಲ ಪ್ರವಾಸಿ ತಾಣವಾಗಿರದೆ, ನಾಡಿನ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ತಿಳಿಸುವ ಜ್ಞಾನಕೇಂದ್ರವಾಗಿ ರೂಪಗೊಳ್ಳಲಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಭಾಗವಾಗಿ ವೀರಭೂಮಿಗೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲಾಗುವುದು ಎಂದರು.
ಸಂಗೊಳ್ಳಿ ರಾಯಣ್ಣ ಅವರ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ಘಟನೆಗಳು, ಅವರ ಹೋರಾಟದ ಪ್ರಮುಖ ಘಟ್ಟಗಳು ಹಾಗೂ ದೇಶಕ್ಕಾಗಿ ಅವರು ಮಾಡಿದ ತ್ಯಾಗವನ್ನು ದೃಶ್ಯ ಹಾಗೂ ಮಾಹಿತಿ ರೂಪದಲ್ಲಿ ಪರಿಚಯಿಸುವುದರಿಂದ ಯುವಜನರಲ್ಲಿ ದೇಶಭಕ್ತಿ ಮತ್ತು ನಾಡಿನ ಇತಿಹಾಸದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಈ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯದ ನಿರ್ವಹಣೆ ಮತ್ತು ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ
ವೀರಭೂಮಿ ಹಾಗೂ ವಸ್ತು ಸಂಗ್ರಹಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುವಂತೆ ಆಕರ್ಷಿತವಾಗಿ ನಿರ್ಮಾಣ ಮಾಡಲಾಗಿದೆ. ಈ ಭಾಗದ ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ ಎಂದು ಎಚ್.ಎಂ. ರೇವಣ್ಣ ಹೇಳಿದರು.
ರಾಯಣ್ಣನ ಚರಿತ್ರೆಯನ್ನು ರಕ್ಷಿಸುವುದು ಎಲ್ಲಾರ ಜವಾಬ್ದಾರಿ
ಸಂಗೊಳ್ಳಿ ರಾಯಣ್ಣ ಅವರ ಹೋರಾಟದ ಚರಿತ್ರೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಐತಿಹಾಸಿಕ ಸ್ಮಾರಕಗಳು ಮತ್ತು ವಸ್ತುಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯವೂ ನಡೆಯಬೇಕು. ವೀರಭೂಮಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಇಲ್ಲಿನ ಇತಿಹಾಸವನ್ನು ಅರಿತುಕೊಂಡು, ರಾಯಣ್ಣ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಶೋಕ ದಳವಾಯಿ ಹೇಳಿದರು.
ಮುಂದಿನ ಪೀಳಿಗೆಗೂ ಜೀವಂತವಾಗಿರಿಸಬೇಕು
ವೀರಭೂಮಿ ಮತ್ತು ವಸ್ತು ಸಂಗ್ರಹಾಲಯ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಇತಿಹಾಸಾಸಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಮತ್ತು ದೇಶಪ್ರೇಮದ ಇತಿಹಾಸವನ್ನು ಅರಿತುಕೊಳ್ಳಬೇಕು. ಈ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣೆ ಮತ್ತು ಹೋರಾಟದ ಸಂದೇಶವನ್ನು ಮುಂದಿನ ಪೀಳಿಗೆಗೂ ಜೀವಂತವಾಗಿರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೆಂಬಲ ಬೆಲೆ ಆಯೋಗದ ಅಧ್ಯಕ್ಷ ಡಾ ಅಶೋಕ್ ದಳವಾಯಿ ಬೆಂಗಳೂರು, ಸಾಂಸ್ಕತಿಕ ಸಲಹಾ ಸಮಿತಿ ಸದಸ್ಯ ಡಾ ಎ ಬಿ ವಗ್ಗರ್, ಉದ್ಯಮಿ ಸುಧೀರ್ ಗಡ್ಡೆ, ಸೋಮು ಹಿಟ್ಟನಗಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗನಾಯಕ, ಸಂಗೋಳ್ಳಿ ರಾಯಣ್ಣ ಪ್ರಾಧಿಕಾರದ ಆಯುಕ್ತ ಎಸ್ ಬಿ ಕೊಂಗವಾಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.



