ಹೊಸದಿಗಂತ ವರದಿ ವಿಜಯಪುರ:
ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಅವರಿಗೆ ‘ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸರ್ಕಾರಿ ಶಾಲೆಯ ಸಹ ಶಿಕ್ಷಕನೋರ್ವನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಆನಂದ ಕೆಂಭಾವಿ ಅಮಾನತ್ತಾದ ಶಿಕ್ಷಕ.
ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ವಿಜಯಾನಂದ ಕಾಶಪ್ಪನವರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಸಂದರ್ಭದ ಫೋಟೊ ಒಂದನ್ನು ಬಳಸಿಕೊಂಡಿದ್ದ ಶಿಕ್ಷಕ ಆನಂದ ಕೆಂಭಾವಿ, ಸಚಿವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ಅರ್ಥದಲ್ಲಿ ನಿಂದನಾತ್ಮಕ ಹಾಗೂ ಅವಹೇಳನಕಾರಿ ಸಂದೇಶಗಳನ್ನು ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.
ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಸಚಿವರ ವಿರುದ್ಧ ಇಂತಹ ಪೋಸ್ಟ್ ಹಾಕಿದ ಶಿಕ್ಷಕನ ನಡತೆಗೆ ಹಿರೇಮಸಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣವೇ ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:
ಗ್ರಾಮಸ್ಥರ ದೂರಿನ ಅನ್ವಯ ಬಿಇಒ ಅವರು ನೀಡಿದ ತನಿಖಾ ವರದಿ ಮತ್ತು ಶಿಫಾರಸ್ಸಿನ ಮೇರೆಗೆ, ನಿಯಮ ಉಲ್ಲಂಘಿಸಿದ ಸಹ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಿಳಿಸಿದ್ದಾರೆ.



