ಕ್ಯಾರೆಟ್ ಹಲ್ವಾ ಎಂದರೆ ಎಲ್ಲರಿಗೂ ಇಷ್ಟ. ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಏನಾದರೂ ಸಿಹಿ ಮಾಡಬೇಕು ಏನಿಸಿದರೆ ಈ ಕ್ಯಾರೆಟ್ ಹಲ್ವಾ ಮಾಡಬಹುದು.
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್
ಹಾಲು
ಸಕ್ಕರೆ
ತುಪ್ಪ
ಏಲಕ್ಕಿ ಪುಡಿ
ಗೋಡಂಬಿ ಮತ್ತು ದ್ರಾಕ್ಷಿ
ಮಾಡುವ ವಿಧಾನ
ಮೊದಲು ಒಂದು ದಪ್ಪ ತಳದ ಬಾಣಲೆಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು. ಅದೇ ಬಾನಲೆಗೆ ಇನ್ನು 2 ಚಮಚ ತುಪ್ಪ ಹಾಕಿ, ತುರಿದ ಕ್ಯಾರೆಟ್ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಮತ್ತು ಕ್ಯಾರೆಟ್ ಬಣ್ಣ ಸ್ವಲ್ಪ ಬದಲಾಗುವವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದು, 2 ಕಪ್ ಗಟ್ಟಿ ಹಾಲನ್ನು ಹಾಕಬೇಕು. ಹಾಲು ಸಂಪೂರ್ಣವಾಗಿ ಇಂಗುವವರೆಗೆ ಮತ್ತು ಕ್ಯಾರೆಟ್ ಮೃದುವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಬೇಕು.
ಹಾಲು ಪೂರ್ತಿ ಇಂಗಿದ ನಂತರ ಅದಕ್ಕೆ 1 ಕಪ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದಾಗ ಹಲ್ವಾ ಮತ್ತೆ ನೀರಾಗುತ್ತದೆ. ಸಕ್ಕರೆ ಪಾಕವು ಗಟ್ಟಿಯಾಗುವವರೆಗೆ ಕೈ ಆಡಿಸುತ್ತಲೇ ಇರಬೇಕು. ಹಲ್ವಾ ಗಟ್ಟಿಯಾಗಿ ಪಾತ್ರೆಯ ತಳ ಬಿಡಲು ಪ್ರಾರಂಭಿಸಿದಾಗ, ಉಳಿದ 1 ಚಮಚ ತುಪ್ಪ, ಏಲಕ್ಕಿ ಪುಡಿ ಮತ್ತು ಹುರಿದಿಟ್ಟ ಗೇರುಬೀಜ-ದ್ರಾಕ್ಷಿ ಸೇರಿಸಿ ಚೆನ್ನಾಗಿ ಬೆರೆಸಿದರೆ, ಬಿಸಿಬಿಸಿ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.



