ಹೊಸದಿಗಂತ ವರದಿ ಸುಂಟಿಕೊಪ್ಪ:
ತುಂಬು ಗರ್ಭಿಣಿ ಹೆಣ್ಣಾನೆಯೊಂದು ಕಾಫಿ ತೋಟದಲ್ಲಿ ಸಾವನ್ನಪ್ಪಿರುವ ಘಟನೆಯೊಂದು ಇಲ್ಲಿಗೆ ಸಮೀಪದ ಅಂದಗೋವೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಹಾರ ಅರಸಿ ನಾಡಿಗೆ ಬಂದ ತುಂಬು ಗರ್ಭಿಣಿ ಆನೆಯೊಂದು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ದಾಸಂಡ ಕಿರಣ್ ಎಂಬವರ ಕಾಫಿ ತೋಟದಲ್ಲಿ ಸಾವಿಗೀಡಾಗಿದ್ದು, ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಮುಜೀಬ್ ಅವರ ಪ್ರಕಾರ, 30 ರಿಂದ 35 ವರ್ಷದ ಹೆಣ್ಣಾನೆ ಪ್ರಸವ ವೇದನೆ ಸಂದರ್ಭ ಉಂಟಾದ ಗಂಭೀರ ಸಮಸ್ಯೆಯಿಂದ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ವಿಭಾಗದ ಎಸಿಎಫ್ ನವೀನ್ ಕುಮಾರ್, ಕುಶಾಲನಗರ ವಲಯ ಅಧಿಕಾರಿ ರಕ್ಷಿತ್ ಶಿವಕುಮಾರ್ ಮತ್ತು ಸಿಬ್ಬಂದಿ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಶ್ವ ಆನೆ ದಿನದಂದೇ ಆನೆಯೊಂದು ಮೃತಪಟ್ಟಿರುವುದು ಪ್ರಾಣಿಪ್ರಿಯರಲ್ಲಿ ಬೇಸರ ಮೂಡಿಸಿದೆ. ಆ.10ರಂದು ನಾಪೋಕ್ಲು ಸಮೀಪ ಗಂಡಾನೆಯೊಂದು ಅನಾರೋಗ್ಯಕ್ಕೀಡಾಗಿ ಜನರ ಮುಂದೆಯೇ ಕುಸಿದು ಬಿದ್ದು ಮೃತಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಹೆಚ್ಚುತ್ತಿರುವ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆ ಸಂಶೋಧನೆ ಕೈಗೊಂಡು ಆನೆಗಳ ಸಾವಿಗೆ ಕಾರಣವನ್ನು ಕಂಡು ಹಿಡಿಯಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬಂದಿದೆ.



