ಹೊಸದಿಗಂತ ವರದಿ ತುಮಕೂರು:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಆಗಸ್ಟ್ ಮಾಹೆಯಲ್ಲಿಯೇ ವಿತರಿಸಲಾಗುವುದು ಎಂದು ತುಮಕುರು ತಾಲ್ಲೂಕು ತಹಶೀಲ್ದಾರ್ ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಅಂತ್ಯೋದಯ ಪಡಿತರ ಚೀಟಿ(ಎಎವೈ)ಗೆ ಮಾಹೆಯಾನ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ ಹಾಗೂ 14 ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು. ಆದ್ಯತಾ(ಕೇಂದ್ರ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 3 ಕೆ.ಜಿ.ಯಂತೆ 6 ಕೆ.ಜಿ. ರಾಗಿ ಹಾಗೂ 2 ಕೆ.ಜಿ.ಯಂತೆ 4 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.
ಇದನ್ನೂ ಓದಿ:
ಆದ್ಯತಾ(ರಾಜ್ಯ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 5 ಕೆ.ಜಿ.ಯಂತೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.
ತುಮಕೂರು ತಾಲ್ಲೂಕು ಪಡಿತರ ಚೀಟಿದಾರರು ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗೆ ಸಂಬಂಧಿಸಿದ 2 ತಿಂಗಳ ಪಡಿತರವನ್ನು ಇದೇ ಮಾಹೆಯಲ್ಲಿಯೇ ಒಟ್ಟಿಗೆ 2 ಕಂತುಗಳಲ್ಲಿ ಪಡೆಯಬೇಕಾಗಿರುವುದರಿಂದ ಕಡ್ಡಾಯವಾಗಿ 2 ಬಾರಿ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಪಡೆಯಬೇಕು.
ಈ ಕಾರ್ಯಕ್ಕಾಗಿ ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಆಹಾರ ಇಲಾಖೆಯ ಸರ್ವರ್ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ಬಯೋಮೆಟ್ರಿಕ್ ನೀಡಿ ಆಗಸ್ಟ್ 31ರೊಳಗಾಗಿ ಪಡಿತರ ಪಡೆಯಬಹುದಾಗಿದೆ. ಪಡಿತರ ಚೀಟಿದಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಅವರು ತಿಳಿಸಿದ್ದಾರೆ.



