October 12, 2026
Monday, October 12, 2026
spot_img

ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ: ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿ, ನಮ್ಮ ಪಕ್ಷದ ಹೈಕಮಾಂಡ್ ಮತ್ತು ನಮ್ಮ 139 ಶಾಸಕರ ಬೆಂಬಲದಿಂದ ನನ್ನನ್ನು ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಈ ಹಿಂದೆ ಅನೇಕ ಪ್ರಮುಖ ನಾಯಕರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇದು ಮುಂದುವರಿದ ಸರ್ಕಾರ ಎಂದಿದ್ದಾರೆ.

ಪ್ರತಿ ಬಾರಿಯಂತೆ ನಾನು ಕೂಡ ಹೊಸ ಆಲೋಚನೆ, ಹೊಸ ಭರವಸೆ, ಹೊಸ ನಂಬಿಕೆಯೊಂದಿಗೆ ಮುಖ್ಯಮಂತ್ರಿಯಾಗಿದ್ದೇನೆ. ಇದು ಟೀಂ ಕರ್ನಾಟಕ, ಇಡೀ ರಾಜ್ಯದ ಶಾಸಕರು, ವಿರೋಧಪಕ್ಷದ ನಾಯಕರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣವನ್ನು ರಾಜ್ಯದ ಜನತೆಯ ಅಭಿವೃದ್ಧಿಗೋಸ್ಕರ ಮಾಡುತ್ತೇವೆ ಎಂದರು. ಚುನಾವಣೆ ಬಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ತೀರ್ಪಿಗೆ ತಲೆಬಾಗೋಣ, ಆದರೆ ಇಂದು ನನಗೆ ಸಿಕ್ಕಿರುವ ಮುಖ್ಯಮಂತ್ರಿ ಅವಕಾಶದಲ್ಲಿ 224 ಶಾಸಕರ ಜೊತೆಗೆ ಕೂಡ ಕೆಲಸ ಮಾಡಲು ಇಚ್ಛಿಸುತ್ತೇನೆ, ನನಗೆ ಎಲ್ಲಾ ಪಕ್ಷದ ಶಾಸಕರೂ ಒಂದೇ ಎಂದರು.

ಹಿಂದಿನ ವಿಚಾರಗಳನ್ನೆಲ್ಲಾ ಮರೆತು ಎಲ್ಲಾ ಶಾಸಕರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾ ಕೆಲಸ ಮಾಡಬೇಕೆಂಬುದು ನನ್ನ ಆಸೆ, ಇಡೀ ವಿಶ್ವ ನಮ್ಮ ಭಾರತವನ್ನು ಕರ್ನಾಟಕ ಮತ್ತು ಬೆಂಗಳೂರು ಮೂಲಕ ನೋಡುತ್ತಿದೆ. ನನಗೆ ಶತ್ರುಗಳು ಬೇಡ. ಹೆಚ್ಚು ಮಿತ್ರರು ಬೇಕು. ನನಗೆ ಆಡಳಿತ, ಪ್ರತಿಪಕ್ಷ ಎಂಬ ಯಾವುದೇ ತಾರತಮ್ಯ ಇಲ್ಲ, ಹಿಂದೆ ಏನಾಗಿದೆಯೋ ಅದು ಬೇಡ. ಮುಂದೆ ಏನಾಗಬೇಕು ಅನ್ನೋದನ್ನು ನೋಡೋಣ, ನನಗೆ ಪ್ರಹ್ಲಾದ ಜೋಷಿಯೂ ಬೇಕು. ಎಚ್ ಡಿ ಕುಮಾರಸ್ವಾಮಿ ಜತೆಗೂ ಕೆಲಸ ಮಾಡಲು ರೆಡಿ ಇದ್ದೀನಿ. ನನಗೆ ಎಲ್ಲರೂ ಬೇಕು. ಒಗ್ಗಟ್ಟಿನಿಂದ ಕರ್ನಾಟಕ ಕಟ್ಟೋಣ. ಆ ಮೂಲಕ ಬಲಿಷ್ಠ ಭಾರತ ನಿರ್ಮಿಸೋಣ ಎಂದರು.

Must Read