ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದು, ಜಾಗತಿಕ ಮಟ್ಟದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೂ (ISS) ಭಾರತಕ್ಕೆ ವಿಶೇಷ ಶುಭಾಶಯಗಳು ಬಂದಿವೆ. ಭೂಮಿಯಿಂದ ಸುಮಾರು 408 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರಷ್ಯಾದ ಮೂವರು ಗಗನಯಾತ್ರಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಭಾರತೀಯರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಯೂರಿ ಗಗಾರಿನ್ ಮಾತುಗಳನ್ನು ನೆನಪಿಸಿದ ಗಗನಯಾತ್ರಿಗಳು
ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್, ಅನ್ನಾ ಕಿಕಿನಾ ಮತ್ತು ಆಂಡ್ರೇ ಫೆಡ್ಯಾಯೆವ್ ಅವರು ಬಾಹ್ಯಾಕಾಶ ನಿಲ್ದಾಣದ ಒಳಗಿನಿಂದಲೇ ಒಂದು ಹೃದಯಸ್ಪರ್ಶಿ ವೀಡಿಯೊ ಸಂದೇಶವನ್ನು ರೆಕಾರ್ಡ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಅವರು 1961 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಆಡಿದ್ದ, “ಭಾರತವು ಬಾಹ್ಯಾಕಾಶದಿಂದ ಎಷ್ಟು ಸುಂದರವಾಗಿ ಕಾಣುತ್ತದೆಯೋ, ನಿಜವಾದ ಸ್ನೇಹಿತರಿರುವ ಭೂಮಿಯ ಮೇಲೆ ಅದಕ್ಕಿಂತಲೂ ಸುಂದರವಾಗಿದೆ” ಎಂಬ ಐತಿಹಾಸಿಕ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ಆರ್ಯಭಟದಿಂದ ಗಗನಯಾನ್‌ವರೆಗೆ ದಶಕಗಳ ಸ್ನೇಹ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ದೇಶಗಳು ದಶಕಗಳಿಂದಲೂ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಗಗನಯಾತ್ರಿಗಳು ಶ್ಲಾಘಿಸಿದ್ದಾರೆ.
1975ರಲ್ಲಿ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ವನ್ನು ಸೋವಿಯತ್ ರಾಕೆಟ್ ಮೂಲಕವೇ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ರಷ್ಯಾದ ‘ಸೋಯುಜ್ ಟಿ-11’ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ, ಅಲ್ಲಿ ಯೋಗ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅಂದು ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತ ಹೇಗೆ ಕಾಣುತ್ತಿದೆ ಎಂದು ಕೇಳಿದಾಗ ರಾಕೇಶ್ ಶರ್ಮಾ ಹೇಳಿದ್ದ “ಸಾರೇ ಜಹಾನ್ ಸೆ ಅಚ್ಚಾ” ಎಂಬ ಮಾತು ಇಂದಿಗೂ ಅಮರವಾಗಿದೆ. ಪ್ರಸ್ತುತ ಭಾರತದ ಮಹಾತ್ವಾಕಾಂಕ್ಷೆಯ ‘ಗಗನಯಾನ್’ ಯೋಜನೆಗೆ ಆಯ್ಕೆಯಾಗಿರುವ ಭಾರತೀಯ ಗಗನಯಾತ್ರಿಗಳಿಗೂ ರಷ್ಯಾದ ಯೂರಿ ಗಗಾರಿನ್ ಕಾಸ್ಮೋನಾಟ್ ತರಬೇತಿ ಕೇಂದ್ರದಲ್ಲೇ ಕಠಿಣ ತರಬೇತಿ ನೀಡಲಾಗಿದೆ.
ಇದನ್ನೂ ಓದಿ:
ಇಸ್ರೋ (ISRO) ಮತ್ತು ರಷ್ಯಾದ ರೋಸ್‌ಕಾಸ್ಮೋಸ್ ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಯುವಕರ ಕಲಾಕೃತಿಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರದರ್ಶಿಸಿದ ರಷ್ಯಾ ಸಿಬ್ಬಂದಿ, ಭಾರತೀಯರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ. ತಮ್ಮ ಸಂದೇಶದ ಕೊನೆಯಲ್ಲಿ ಅವರು “ಭಾರತ-ರಷ್ಯಾ ಸ್ನೇಹ ಅಮರವಾಗಲಿ” ಎಂದು ಘೋಷಿಸುವ ಮೂಲಕ ಉಭಯ ದೇಶಗಳ ಸ್ನೇಹವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.



