ಹೊಸದಿಗಂತ ವರದಿ ಮಡಿಕೇರಿ:
ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಪವಿತ್ರ ಕ್ಷೇತ್ರ ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪತ್ನಿ ಉಷಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರೊಂದಿಗೆ ಮಳೆಯ ನಡುವೆಯೇ ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಸ್ವಾಗತಿಸಿದರು.
ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ನಮಸ್ಕಾರ
ಬಳಿಕ ರಸ್ತೆ ಮಾರ್ಗವಾಗಿ ತ್ರಿವೇಣಿ ಸಂಗಮಕ್ಕೆ ತೆರಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಮಾತೆಗೆ ನಮಸ್ಕರಿಸಿದರು. ನಂತರ ಭಗಂಡೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಾಡಿನ ಸುಭಿಕ್ಷೆ ಹಾಗೂ ಜನರ ಒಳಿತಿಗಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ:
ಮೊಹಮ್ಮದ್ ಹ್ಯಾರೀಸ್ ನಲಪಾಡ್ ವಿವಾಹದಲ್ಲಿ ಭಾಗಿ
ಭಾಗಮಂಡಲದ ಭೇಟಿ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಡಿಕೇರಿ ಸಮೀಪದ ಮೇಕೇರಿಯ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು.
ತಲಕಾವೇರಿಗೆ ತೆರಳದ ಡಿಕೆಶಿ; ಪತ್ನಿಯಿಂದ ವಿಶೇಷ ಪೂಜೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗಮಂಡಲದಲ್ಲಿ ಪೂಜೆ ಸಲ್ಲಿಸಿದರೂ, ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಗೆ ಭೇಟಿ ನೀಡಲಿಲ್ಲ. ಅವರ ಪತ್ನಿ ಉಷಾ ಅವರು ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿಯಾಗಿ ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಸ್ಥಳೀಯ ಪ್ರತೀತಿ ಇದೆ. ಇದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರು ತಲಕಾವೇರಿಗೆ ತೆರಳಿಲ್ಲ ಎಂಬ ಚರ್ಚೆ ಸ್ಥಳೀಯ ವಲಯದಲ್ಲಿ ನಡೆದಿದೆ.



