August 16, 2026
Sunday, August 16, 2026
spot_img

2027 ವಿಶ್ವಕಪ್‌ಗೆ ಹೊಸ ಮುಹೂರ್ತ? ಗಾಂಧಿ ಜಯಂತಿಯಂದು ಟೂರ್ನಿ ಆರಂಭಕ್ಕೆ ಐಸಿಸಿ ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಕುತೂಹಲ ಹೆಚ್ಚಾಗಿದೆ. ಟೂರ್ನಿಯ ಆರಂಭದ ದಿನಾಂಕದ ಕುರಿತು ಐಸಿಸಿ ಹೊಸ ಯೋಜನೆಯೊಂದನ್ನು ಪರಿಶೀಲಿಸುತ್ತಿದ್ದು, ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ವಿಶ್ವಕಪ್ ಆರಂಭಿಸುವ ಸಾಧ್ಯತೆ ಚರ್ಚೆಯಲ್ಲಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿ ಗಾಂಧಿ ಜಯಂತಿಯಂದು ಆರಂಭವಾದರೆ, ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ವಿಶೇಷ ಸಂದರ್ಭವಾಗಲಿದೆ.

ಮಹಾತ್ಮ ಗಾಂಧೀಜಿಯವರ ಜೀವನದ ಪ್ರಮುಖ ಅವಧಿಯೊಂದು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದು, ಅಲ್ಲಿಯೇ ಅವರ ಸತ್ಯಾಗ್ರಹದ ಚಿಂತನೆಗಳಿಗೆ ಮತ್ತಷ್ಟು ರೂಪ ದೊರೆತಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಗಾಂಧಿ ಜಯಂತಿಯ ವಿಶೇಷ ಹಿನ್ನೆಲೆ ನೀಡುವ ಉದ್ದೇಶದಿಂದ ಅಕ್ಟೋಬರ್ 2ರ ದಿನಾಂಕವನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

14 ತಂಡಗಳ ಕಣ

2027ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ಐಸಿಸಿ ಈಗಾಗಲೇ ಹೊಸ ಮೂರು ಹಂತದ ಸ್ಪರ್ಧಾ ಮಾದರಿಯನ್ನು ಪ್ರಕಟಿಸಿದೆ. ಮೊದಲ ಹಂತದಲ್ಲಿ ಕಡಿಮೆ ಶ್ರೇಯಾಂಕದ ಮೂರು ತಂಡಗಳು ‘ಸೂಪರ್ ಸೀರೀಸ್’ನಲ್ಲಿ ಆಡಲಿದ್ದು, ವಿಜೇತ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.

ಸೂಪರ್ 7 ಹಂತ ವಿಶೇಷ

ಮುಂದಿನ ಹಂತದಲ್ಲಿ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಲ್ಲಿಂದ ಆಯ್ಕೆಯಾಗುವ ಏಳು ತಂಡಗಳು ‘ಸೂಪರ್ 7’ ಹಂತದಲ್ಲಿ ಮುಖಾಮುಖಿಯಾಗಲಿವೆ. ಈ ಹಂತದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಮೂರು ದೇಶಗಳಲ್ಲಿ ವಿಶ್ವಕಪ್

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ 12 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾದಲ್ಲಿ ಎಂಟು, ಜಿಂಬಾಬ್ವೆಯಲ್ಲಿ ಮೂರು ಹಾಗೂ ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ಒಂದು ಕ್ರೀಡಾಂಗಣವನ್ನು ಆತಿಥ್ಯಕ್ಕೆ ಆಯ್ಕೆ ಮಾಡಲಾಗಿದೆ.

ಟೂರ್ನಿಗೆ ಐತಿಹಾಸಿಕ ಮಹತ್ವ

2027ರ ವಿಶ್ವಕಪ್ 24 ವರ್ಷಗಳ ಬಳಿಕ ಮತ್ತೆ ಆಫ್ರಿಕಾ ಖಂಡಕ್ಕೆ ಮರಳುತ್ತಿದೆ. ಗಾಂಧಿ ಜಯಂತಿಯಂದು ಟೂರ್ನಿ ಆರಂಭಿಸುವ ಯೋಜನೆ ಅಂತಿಮಗೊಂಡರೆ, ಕ್ರಿಕೆಟ್ ಮತ್ತು ಇತಿಹಾಸವನ್ನು ಬೆಸೆಯುವ ವಿಶೇಷ ಆರಂಭಕ್ಕೆ ವಿಶ್ವಕಪ್ ಸಾಕ್ಷಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !