ಕಿವಿಯೊಳಗೆ ಕೀಟ ಹೋದ್ರೆ ಕಿರಿಕಿರಿಗಿಂತ ಮೊದಲು ಭಯವಾಗುತ್ತೆ. ಕೀಟ ಚಲಿಸುವಾಗ ಕಿವಿಯಲ್ಲಿ ಗುಯ್ಗುಯ್ ಶಬ್ದ ಜೊತೆಗೆ ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಗಾಬರಿಯಾಗಿ ಕಿವಿಗೆ ಬೆರಳು, ಕಡ್ಡಿ ಅಥವಾ ಇತರ ವಸ್ತುಗಳನ್ನು ಹಾಕುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಮೊದಲು ಶಾಂತವಾಗಿರಿ
ಕಿವಿಯೊಳಗೆ ಕೀಟ ಹೋಗಿದೆ ಎಂದು ತಿಳಿದ ತಕ್ಷಣ ಗಾಬರಿಯಾಗಬೇಡಿ. ಕಿವಿಯೊಳಗೆ ಬೆರಳು, ಕಾಟನ್ ಬಡ್ ಅಥವಾ ಹೇರ್ಪಿನ್ ಹಾಕಿ ಕೀಟವನ್ನು ಹೊರತೆಗೆಯಲು ಪ್ರಯತ್ನಿಸಬೇಡಿ. ಇದರಿಂದ ಕೀಟ ಮತ್ತಷ್ಟು ಒಳಗೆ ಹೋಗುವ ಅಥವಾ ಕಿವಿಗೆ ಗಾಯವಾಗುವ ಸಾಧ್ಯತೆಯಿದೆ.
ತಲೆಯನ್ನು ಒಂದು ಬದಿಗೆ ವಾಲಿಸಿ
ಕೀಟ ಹೋಗಿರುವ ಕಿವಿಯನ್ನು ಮೇಲಕ್ಕೆ ಬರುವಂತೆ ತಲೆಯನ್ನು ವಾಲಿಸಿ. ಕಿವಿಯ ಹೊರಭಾಗವನ್ನು ನಿಧಾನವಾಗಿ ಹಿಡಿದು ಸ್ವಲ್ಪ ಹಿಂದಕ್ಕೆ ಎಳೆಯಬಹುದು. ಕೆಲವೊಮ್ಮೆ ಕೀಟ ಸ್ವತಃ ಹೊರಬರಬಹುದು.
ಎಣ್ಣೆ ಅಥವಾ ನೀರು ಹಾಕುವ ಮೊದಲು ಎಚ್ಚರಿಕೆ
ಕೀಟ ಜೀವಂತವಾಗಿದ್ದು ಕಿವಿಯೊಳಗೆ ಚಲಿಸುತ್ತಿದ್ದರೆ, ಕೆಲವು ಸಂದರ್ಭಗಳಲ್ಲಿ ವೈದ್ಯರು ಸೂಚಿಸುವ ರೀತಿಯಲ್ಲಿ ಎಣ್ಣೆ ಅಥವಾ ಇತರ ಸೂಕ್ತ ದ್ರವವನ್ನು ಬಳಸಬಹುದು. ಆದರೆ ಕಿವಿಯ ಪರದೆಗೆ ರಂಧ್ರ, ಕಿವಿಯಿಂದ ರಕ್ತ ಅಥವಾ ದ್ರವ ಸೋರಿಕೆ, ಕಿವಿಗೆ ಶಸ್ತ್ರಚಿಕಿತ್ಸೆಯಾಗಿದ್ದಾರೆ ಸ್ವತಃ ಯಾವುದೇ ದ್ರವ ಹಾಕಬೇಡಿ.
ಕೀಟ ಹೊರಬರದಿದ್ದರೆ ವೈದ್ಯರನ್ನು ಸಂಪರ್ಕಿಸಿ
ಕೀಟ ಹೊರಬರದಿದ್ದರೆ ಅಥವಾ ತೀವ್ರ ನೋವು, ರಕ್ತಸ್ರಾವ, ತಲೆಸುತ್ತು, ಕೇಳುವಿಕೆ ಕಡಿಮೆಯಾಗುವುದು ಅಥವಾ ನಿರಂತರ ಕಿರಿಕಿರಿ ಕಂಡುಬಂದರೆ ENT ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಉತ್ತಮ. ವೈದ್ಯರು ಸೂಕ್ತ ಉಪಕರಣ ಬಳಸಿ ಕೀಟವನ್ನು ಸುರಕ್ಷಿತವಾಗಿ ತೆಗೆದುಹಾಕಬಹುದು.



