ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆರಾಜ್ಯವಾದ ‘ಕೇರಳ’ದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ಮಹತ್ವದ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕೇರಳ ರಾಜ್ಯದ ದಶಕಗಳ ಕಾಲದ ಕನಸು ನನಸಾಗಿದ್ದು, ಈ ವಿಧೇಯಕವು ಈಗ ಅಧಿಕೃತವಾಗಿ ದೇಶದಲ್ಲಿ ಕಾನೂನಾಗಿ ಜಾರಿಗೆ ಬಂದಿದೆ.
ಕಳೆದ ಮಂಗಳವಾರವಷ್ಟೇ ಲೋಕಸಭೆಯಲ್ಲಿ ‘ಕೇರಳ (ವಿಧೇಯಕ 2026’ ಅಂಗೀಕಾರಗೊಂಡಿತ್ತು. ಅದರ ಮರುದಿನವೇ ರಾಜ್ಯಸಭೆಯೂ ಸಹ ಈ ವಿಧೇಯಕಕ್ಕೆ ತನ್ನ ಒಪ್ಪಿಗೆಯ ಮುದ್ರೆ ಒತ್ತಿತ್ತು. ಈ ವಿಧೇಯಕದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು, ಕೇರಳ ಸರ್ಕಾರವು ತನ್ನ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಕೋರಿ 2024 ರ ಜೂನ್ ತಿಂಗಳಲ್ಲೇ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು ಎಂದು ಮಾಹಿತಿ ನೀಡಿದರು.

ರಾಷ್ಟ್ರಪತಿ ಅನುಮೋದನೆ ಪ್ರಕ್ರಿಯೆ:
ಕೇರಳ ವಿಧಾನಸಭೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸಂವಿಧಾನದ ನಿಯಮಾವಳಿಗಳ ಪ್ರಕಾರ ಈ ವಿಧೇಯಕವನ್ನು ಮರಳಿ ರಾಜ್ಯ ಶಾಸಕಾಂಗದ ಅಭಿಪ್ರಾಯಕ್ಕಾಗಿ ಕಳುಹಿಸಿಕೊಟ್ಟಿದ್ದರು. ತದನಂತರ ಕೇರಳ ವಿಧಾನಸಭೆಯು ಈ ವಿಧೇಯಕವನ್ನು ಒಮ್ಮತದಿಂದ ಒಪ್ಪಿ ಜಾರಿಗೊಳಿಸುವಂತೆ ಮತ್ತೊಮ್ಮೆ ಸರ್ವಾನುಮತದ ನಿರ್ಣಯವನ್ನು ಕೈಗೊಂಡು ರಾಷ್ಟ್ರಪತಿಗಳಿಗೆ ಕಳುಹಿಸಿತ್ತು. ಪ್ರಸ್ತುತ ರಾಷ್ಟ್ರಪತಿಗಳು ಇದಕ್ಕೆ ಸಹಿ ಮಾಡಿರುವುದರಿಂದ ಹೆಸರು ಬದಲಾವಣೆಯ ಪ್ರಕ್ರಿಯೆ ಪೂರ್ಣಗೊಂಡಿದೆ.
ಇದನ್ನೂ ಓದಿ:
ಸಂವಿಧಾನಕ್ಕೆ ತಿದ್ದುಪಡಿ:
ಈ ಹೊಸ ಕಾನೂನಿನ ಪ್ರಕಾರ, ಭಾರತದ ಸಂವಿಧಾನದ 3ನೇ ವಿಧಿಗೆ ಅನುಗುಣವಾಗಿ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತದೆ. ಸಂವಿಧಾನದ ಮೊದಲನೇ ಅನುಸೂಚಿಯಲ್ಲಿ (ಇರುವ ‘ಕೇರಳ’ ಎಂಬ ಹೆಸರನ್ನು ಮಾರ್ಪಡಿಸಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲಾಗುತ್ತದೆ. ಮಲಯಾಳಂ ಭಾಷೆಯಲ್ಲಿ ಈ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತಿತ್ತು. ಆದರೆ ದೇಶದ ಅಧಿಕೃತ ದಾಖಲೆಗಳಲ್ಲಿ ‘ಕೇರಳ’ ಎಂದಿತ್ತು. ಇನ್ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಅಧಿಕೃತ ದಾಖಲೆಗಳು ಹಾಗೂ ಮೈಲಿಗಲ್ಲುಗಳಲ್ಲಿ ಈ ರಾಜ್ಯವನ್ನು ‘ಕೇರಳಂ ರಾಜ್ಯ’ ಎಂದೇ ಕರೆಯಲಾಗುತ್ತದೆ.



