August 18, 2026
Tuesday, August 18, 2026
spot_img

ಮಕ್ಕಳ ಬಾಲ್ಯವನ್ನು ಇನ್ನಷ್ಟು ಮೆಮೋರಬಲ್‌ ಮಾಡೋದಕ್ಕೆ ಪೋಷಕರು ಈ ಐದು ಕೆಲಸಗಳನ್ನು ಮಾಡಬಹುದು

ಮೇಘನಾ ಶೆಟ್ಟಿ, ಶಿವಮೊಗ್ಗ

ನಮ್ಮ ಬಾಲ್ಯಕ್ಕೂ ಈಗ ಮಕ್ಕಳಿಗೆ ನಾವು ನೀಡುತ್ತಿರುವ ಬಾಲ್ಯಕ್ಕೂ ತುಂಬಾನೇ ವ್ಯತ್ಯಾಸವಿದೆ. ಮುಖ್ಯವಾಗಿ ಟೆಕ್ನಾಲಜಿ ಇಲ್ಲದೆಯೇ ಜನರ ಜೊತೆ, ಸ್ನೇಹಿತರ ಜೊತೆ, ನೆಂಟರಿಷ್ಟರ ಜೊತೆ ನಾವು ಕಳೆದಷ್ಟು ಸಮಯವನ್ನು ಈಗಿನ ಮಕ್ಕಳು ಪೋಷಕರ ಜೊತೆಯೂ ಕಳೆಯೋಕೆ ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೋಗೋದು ಬರೋದು ಬಿಟ್ಟರೆ ಇನ್ಯಾವ ಚಟುವಟಿಕೆಗಳನ್ನು ನಾವು ಕಂಡವರಲ್ಲ. ಆದರೆ ಈಗಿನ ಮಕ್ಕಳು ದೊಡ್ಡವರಿಗಿಂತ ಬ್ಯುಸಿ. ಬೆಳಗ್ಗೆ ಯೋಗ ಅಥವಾ ಜಿಮ್ನಾಸ್ಟಿಕ್ಸ್‌, ನಂತರ ಶಾಲೆ, ಶಾಲೆಯಿಂದ ಬಂದ ನಂತರ ಟ್ಯೂಷನ್ಸ್‌! ವೀಕೆಂಡ್ಸ್‌ನಲ್ಲಿ ಚೆಸ್‌, ಅಬಾಕಸ್‌, ಮ್ಯೂಸಿಕ್‌, ಡ್ಯಾನ್ಸ್‌ ಇನ್ನಿತರ ಚಟುವಟಿಕೆಗಳಿಗೆ ಮಕ್ಕಳ ಹೆಸರನ್ನು ಬರೆಸಿ ಬಂದಿರುತ್ತೀರಿ. ಇದೆಲ್ಲದರ ಮಧ್ಯೆ ಮಕ್ಕಳ ಬಾಲ್ಯ ಕಳೆದುಹೋಗುತ್ತಿದೆ. ದೊಡ್ಡವರಾದ ನಂತರ ನಿನ್ನ ಫೇವರೆಟ್‌ ಚೈಲ್ಡ್‌ಹುಡ್‌ ಮೆಮೋರಿ ಯಾವುದು ಎಂದು ಕೇಳಿದರೆ ಒಂದೂ ಇಲ್ಲದೆ ಕಕ್ಕಾಬಿಕ್ಕಿಯಾಗಬೇಕಾಗುತ್ತದೆ. ನೀವು ಕೊಡಿಸುವ ಹೊಸ ಬಟ್ಟೆ, ಬಣ್ಣದ ಆಟಿಕೆಗಳು ಮಕ್ಕಳ ಬಾಲ್ಯವನ್ನು ಅಂದವಾಗಿಸೋದಿಲ್ಲ. ಅದು ಕ್ಷಣಿಕ ಖುಷಿ ನೀಡುತ್ತದೆ ಅಷ್ಟೆ. ದೊಡ್ಡವರಾದಮೇಲೂ ಅವರು ನೆನಪಿಡುವಂತಹ ಬೆಸ್ಟ್‌ ಟೈಮ್‌ ಕೊಡಬೇಕಾದ್ದು ನಿಮ್ಮ ಕರ್ತವ್ಯ.

ಈಗಿನ ಮಕ್ಕಳು ಹೆಚ್ಚೆಂದರೆ ಐದನೇ ಕ್ಲಾಸಿಗೆ ಹೋಗುವವರೆಗೂ ನಿಮ್ಮನ್ನು ಅತಿಯಾಗಿ ಹಚ್ಚಿಕೊಂಡು ಪ್ರೀತಿಸಬಹುದು ಅಷ್ಟೆ. ತದನಂತರ ಅವರ ಪ್ರಿಯಾರಿಟಿ ಬೇರೆ, ಇಂಡಿಪೆಂಡೆಂಟ್‌ ಆಗಿರಲು ಇಷ್ಟಪಡುತ್ತಾರೆ. ಸ್ನೇಹಿತರನ್ನು ಹೆಚ್ಚು ಬಯಸುತ್ತಾರೆ. ಅಲ್ಲಿಯವರೆಗೂ ನಿಮಗೆ ಸಮಯವಿದೆ. ನಿಮ್ಮ ಬಾಂಧವ್ಯವನ್ನು ಗಟ್ಟಿ ಮಾಡಿಕೊಂಡರೆ ಮುಂದೆಂದೂ ಬಿರುಕು ಬರೋದಕ್ಕೆ ಸಾಧ್ಯವೇ ಇಲ್ಲ. ಸಾಧ್ಯವಾದಷ್ಟು ಮಕ್ಕಳ ಜೊತೆ ಸಮಯ ಕಳೆಯಿರಿ. ಫೋನ್‌ ಮುಕ್ತ ಜೀವನ ಆರಂಭಿಸಲು ಪ್ರಯತ್ನಿಸಿ. ಸಾಮಾಜಿಕ ಜಾಲತಾಣಗಳನ್ನು ಒಬ್ಬರೇ ಇದ್ದಾಗ ಬಳಕೆ ಮಾಡಿ. ಕುಟುಂಬದ ಜೊತೆ ಇದ್ದಾಗ ಸಂಪೂರ್ಣ ಫೋಕಸ್‌ ಅವರ ಮೇಲೆಯೇ ಇರಲಿ.

ಮಕ್ಕಳ ಬಾಲ್ಯದ ನೆನಪಿನ ಬುತ್ತಿ ಇನ್ನಷ್ಟು ಅಂದವಾಗೋಕೆ ಹೀಗೆ ಮಾಡಿ..

ತಿಂಗಳಿನಲ್ಲಿ ಒಮ್ಮೆಯಾದ್ರೂ ಇಡೀ ಕುಟುಂಬ ಒಟ್ಟಿಗೇ ಕೂತು ಮನೆಯನ್ನೇ ರೆಸ್ಟೋರೆಂಟ್‌ ಮಾಡಿಕೊಳ್ಳಿ. ರುಚಿ ರುಚಿಯಾದ ಅಡುಗೆ ಮಾಡಿ, ಸ್ವಲ್ಪ ಡ್ರೆಸ್‌ ಮಾಡಿಕೊಂಡು, ಮನೆಯೆಲ್ಲಾ ಕ್ಯಾಂಡಲ್‌ ಹಚ್ಚಿಕೊಂಡು ಸಣ್ಣದೊಂದು ಡಿನ್ನರ್‌ ಮಾಡಿ. ಇಲ್ಲಿ ಮಕ್ಕಳಿಗೆ ಜೋರು ಮಾಡೋದು, ಗದರೋಡು, ಬೇಡ ಅನ್ನೋ ಪದಕ್ಕೆ ಜಾಗ ಇಲ್ಲ.

ತಿಂಗಳಿನಲ್ಲಿ ಒಂದು ದಿನ ಇಡೀ ಅವರು ಕೇಳಿದ್ದಕ್ಕೆ ನೀವು ಒಕೆ ಹೇಳಿ. ಇವತ್ತು ಹೊರಗೆ ಹೋಗಿ ಊಟ ಮಾಡೋಣ? ಒಕೆ. ಇವತ್ತು ಫಿಲಂ ನೋಡೋಕೆ ಹೋಗೋಣ? ಒಕೆ. ಹೀಗೆ ಅವರಿಗಾಗಿ ಒಂದು ದಿನವನ್ನು ಮೀಸಲಿಡಿ. ಅವರು ನಿಮ್ಮಿಂದ ಏನನ್ನು ಬಯಸುತ್ತಾರೆ ಎನ್ನೋದು ಅರ್ಥವಾಗುತ್ತದೆ. ಹಾಗೆಯೇ ಮಕ್ಕಳಿಗೂ ಪೋಷಕರು ನಮ್ಮನ್ನು ಸಮಾನರಂತೆ ಕಾಣುತ್ತಾರೆ ಎಂದು ಅರ್ಥವಾಗುತ್ತದೆ.

ಮಕ್ಕಳನ್ನು ಅವರ ರೂಮಿನಲ್ಲಿ ಮಲಗಿಸುತ್ತೀರಿ. ನಿಮ್ಮ ರೂಮಿನಲ್ಲಿ ನೀವು ಮಲಗುತ್ತೀರಿ. ತಿಂಗಳಿಗೊಮ್ಮೆ ಎಲ್ಲರೂ ಹಾಲ್‌ಗೆ ಬನ್ನಿ. ಚಾಪೆ ಹಾಸಿಕೊಳ್ಳಿ, ನಿಮ್ಮಿಷ್ಟದ ಸಿನಿಮಾ ಹಾಕಿ, ನಿತ್ಯಕ್ಕಿಂತ ತುಸು ಸಮಯ ಹೆಚ್ಚು ಹೊತ್ತು ಎದ್ದಿರಲು ಅವಕಾಶ ಕೊಡಿ. ದೊಡ್ಡವರಾದ ನಂತರ ಈ ರಾತ್ರಿಗಳನ್ನು ಅವರು ಸದಾ ಮಿಸ್‌ ಮಾಡಿಕೊಳ್ತಾರೆ.

ವಾರಕ್ಕೊಮ್ಮೆ ಅಥವಾ ಫ್ರೀ ಆದ ಸಮಯದಲ್ಲಿ ಇಡೀ ಫ್ಯಾಮಿಲಿ ಹತ್ತಿರದಲ್ಲೇ ಇರುವ ಪಾರ್ಕ್‌ಗೆ ಪಿಕ್‌ನಿಕ್‌ ಹೋಗಿ. ಮಕ್ಕಳ ಇಷ್ಟದ ಕೇಕ್‌, ಪಿಝಾ ತೆಗೆದುಕೊಂಡು ಹೋಗಿ. ಒಮ್ಮೆ ಮಾಡಿ ಬಿಡಬೇಡಿ. ಈ ಎಲ್ಲವನ್ನೂ ಸಂಪ್ರದಾಯಗಳಂತೆ ಪಾಲಿಸಿ.

ಮಕ್ಕಳಿಗೆ ಅಡುಗೆ ಮಾಡಲು ಬಿಡಿ. ತಿಂಗಳಿಗೊಮ್ಮೆಯಾದ್ರೂ ಮಕ್ಕಳಿಗೆ ಅಡುಗೆ ಮಾಡಲು ಬಿಡಿ. ಪೋಷಕರ ಗೈಡೆನ್ಸ್‌ ಮೇರೆಗೆ ಮಕ್ಕಳಿಗೆ ಸುಲಭವಾಗಿ ಮಾಡುವ ರೆಸಿಪಿಯನ್ನು ಹೇಳಿಕೊಡಿ. ಅದಕ್ಕೆ ಮಕ್ಕಳದ್ದೇ ಹೆಸರನ್ನು ಇಡಿ. ಇದು ಕೊನೆವರೆಗೂ ಅವರಿಗೆ ನೆನಪಿನಲ್ಲಿ ಉಳಿಯುತ್ತದೆ.

ಈ ಎಲ್ಲವನ್ನೂ ಮಾಡಿ ನಾವು ಬೆಳೆದಿಲ್ಲ ಹೌದು, ನಮ್ಮ ಪೋಷಕರು ಇದ್ಯಾವುದನ್ನೂ ಮಾಡಿಲ್ಲದೆಯೇ ನಮಗೆ ಸ್ಪೆಷಲ್‌. ಆದರೆ ನಮಗೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ ನಮ್ಮ ಮಕ್ಕಳಿಗೂ ಕೊಡೋದಿಲ್ಲ ಎನ್ನುವುದು ಸ್ವಾರ್ಥವಾಗುತ್ತದೆ. ಮಕ್ಕಳು ನಿಮ್ಮಿಂದ ಡಿಸ್ಕನೆಕ್ಟ್‌ ಆಗದಂತೆ ನೋಡಿಕೊಳ್ಳುವುದು, ಪ್ರೀತಿಯಿಂದ ಕುಟುಂಬವನ್ನು ಹೆಣೆದು ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !