ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಂದ ಹಣ ವಸೂಲಿ ಮಾಡಿ ವಿವಿಧ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಜೈಲಿನಲ್ಲಿ ಅಧಿಕಾರಿಗಳೇ ಮೊಬೈಲ್ಫೋನ್, ಗಾಂಜಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಹಣಕ್ಕಾಗಿ ಕೈದಿಗಳಿಗೆ ಪೂರೈಸುತ್ತಿದ್ದಾರೆ ಎಂದು ತುಮಕೂರು ಮೂಲದ ಸಾಯಿಕುಮಾರ್ ಎಂಬ ಯುವಕ ವಿಡಿಯೊ ಮೂಲಕ ಆರೋಪಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
2024ರಲ್ಲಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದ ಸಂದರ್ಭದಲ್ಲಿ ತಾನು ಕಂಡಿರುವ ಹಾಗೂ ಅನುಭವಿಸಿರುವ ಘಟನೆಗಳ ಕುರಿತು ಸಾಯಿಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಜೈಲಿನೊಳಗೆ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಹಣ ನೀಡುವ ಕೈದಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಜೈಲಿನೊಳಗೆ ಮೊಬೈಲ್, ಗಾಂಜಾ ಪೂರೈಕೆ?
ಅಧಿಕಾರಿಗಳ ಗಮನಕ್ಕೆ ಅಕ್ರಮ ಚಟುವಟಿಕೆಗಳನ್ನು ತಂದರೆ ಕೈದಿಗಳ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗುತ್ತದೆ ಎಂದು ಸಾಯಿಕುಮಾರ್ ಆರೋಪಿಸಿದ್ದಾರೆ. ಜೈಲಿನೊಳಗೆ ಮೊಬೈಲ್ಫೋನ್, ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಹೇಗೆ ಪ್ರವೇಶಿಸುತ್ತವೆ ಎಂಬುದರ ಕುರಿತು ತನಿಖೆ ನಡೆಸಬೇಕಿದ್ದು, ಕೆಲವು ಅಧಿಕಾರಿಗಳೇ ಇವುಗಳ ಪೂರೈಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಈ ಆರೋಪಗಳು ನಿಜವೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಸಮಗ್ರ ತನಿಖೆಯಿಂದಲೇ ಸ್ಪಷ್ಟಪಡಿಸಬೇಕಿದೆ. ಜೈಲಿನ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ವೇಶ್ಯಾವಾಟಿಕೆ ಆರೋಪ
ಹಿಂಡಲಗಾ ಜೈಲಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಸಾಯಿಕುಮಾರ್ ಮಾಡಿದ್ದಾರೆ. ಹಣದ ಪ್ರಭಾವದಿಂದ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಕೈದಿಗಳಿಗೆ ಅಕ್ರಮ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಇದೇ ವೇಳೆ, ಕಳೆದ ಕೆಲ ತಿಂಗಳ ಹಿಂದೆ ಹಿಂಡಲಗಾ ಜೈಲಿನಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಬಗ್ಗೆಯೂ ಸಾಯಿಕುಮಾರ್ ಆರೋಪ ಮಾಡಿದ್ದಾರೆ. ಹಣಕ್ಕಾಗಿ ಕೈದಿಗಳೊಂದಿಗೆ ಅಶ್ಲೀಲ ವಿಡಿಯೊ ಕಾಲ್ ನಡೆಸುತ್ತಿದ್ದರು ಹಾಗೂ ಕೈದಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ನಿಷೇಧಿತ ವಸ್ತುಗಳನ್ನು ಕಳ್ಳ ಮಾರ್ಗದ ಮೂಲಕ ಜೈಲಿನೊಳಗೆ ತಲುಪಿಸುವ ಕಾರ್ಯದಲ್ಲಿ ಆಕೆ ಭಾಗಿಯಾಗಿದ್ದರು ಎಂಬ ಆರೋಪವನ್ನೂ ಮಾಡಿದ್ದಾರೆ.
ಸಹೋದ್ಯೋಗಿಯೊಂದಿಗೆ ವಿವಾದ; ಪ್ರಕರಣ ಮುಚ್ಚಿಹಾಕಿದ ಆರೋಪ
ಸಂಬಂಧಪಟ್ಟ ಮಹಿಳಾ ಅಧಿಕಾರಿಗೆ ಸಹೋದ್ಯೋಗಿ ಅಧಿಕಾರಿಯೊಂದಿಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಬಳಿಕ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳು ಅಥವಾ ಇಲಾಖೆಯ ಸ್ಪಷ್ಟನೆ ಸದ್ಯಕ್ಕೆ ಬಹಿರಂಗವಾಗಿಲ್ಲ.
ಹಿಂಡಲಗಾ ಜೈಲಿನಂತಹ ಸೂಕ್ಷ್ಮ ಭದ್ರತಾ ಪ್ರದೇಶದಲ್ಲಿ ಮೊಬೈಲ್, ಮಾದಕ ವಸ್ತುಗಳ ಅಕ್ರಮ ಪ್ರವೇಶ, ಕೈದಿಗಳೊಂದಿಗೆ ಅಧಿಕಾರಿಗಳ ಅಕ್ರಮ ಸಂಪರ್ಕ ಸೇರಿದಂತೆ ಆರೋಪಗಳು ಕೇಳಿಬಂದಿರುವುದು ಗಂಭೀರ ವಿಚಾರವಾಗಿದೆ. ಆರೋಪಗಳ ಸತ್ಯಾಸತ್ಯತೆ ತಿಳಿಯಲು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಜೈಲಿನ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಬಳಕೆ ಕುರಿತ ದಾಖಲೆಗಳು, ಪ್ರವೇಶ-ನಿರ್ಗಮನ ದಾಖಲೆಗಳು ಹಾಗೂ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ವಿವರಗಳನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರಬಹುದು.
ಈ ಕುರಿತು ಕಾರಾಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು; ಆರೋಪಗಳು ಆಧಾರರಹಿತವಾಗಿದ್ದರೆ ಅದನ್ನೂ ತನಿಖೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ.



